×
Ad

VB-G RAM G ಹೆಸರಲ್ಲಿ ಬಡವರಿಗೆ ಮೋಸ: ಬಿಜೆಪಿ ವಿರುದ್ಧ ಆಯೇಷಾ ಫರ್ಝಾನ ವಾಗ್ದಾಳಿ

Update: 2026-01-20 22:12 IST

ಕಲಬುರಗಿ: VB-G RAM G ಯೋಜನೆ ಹೆಸರಿನಲ್ಲಿ ಬಿಜೆಪಿ ಸರಕಾರ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ ಎಂದು ಕೆಪಿಸಿಸಿ ವಕ್ತಾರೆ ಆಯೇಷಾ ಫರ್ಝಾನ್ ಹೇಳಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯೇಷಾ ಫರ್ಝಾನ್, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಕಿತ್ತುಹಾಕಿದ ಬಿಜೆಪಿ ಬಡವರ ಅನ್ನ ಕಸಿದುಕೊಂಡಿದೆ. ಈ ಕರಾಳ ಕಾಯ್ದೆಯ ವಿರುದ್ಧ ದೇಶಾದ್ಯಂತ ಹೋರಾಟ ಕೈಗೊಳ್ಳಲಾಗುತ್ತಿದೆ ಎಂದರು.

ಕೇಂದ್ರ ಸರಕಾರ ರಾಮನ ಹೆಸರಿನಲ್ಲಿ ದೇಶದ ಜನರಲ್ಲಿ ಭಾವನಾತ್ಮಕವಾಗಿ ಆಟವಾಡುತ್ತಿದೆ. ರಾಮನ ಹೆಸರಿನಲ್ಲಿ ಮೋಸದ ಕೆಲಸ ಮಾಡುತ್ತಿದೆ. ಯುಪಿಎ ಸರಕಾರವಿದ್ದಾಗ ಜಾರಿಗೊಳಿಸಿದ್ದ ನರೇಗಾ ಯೋಜನೆಯು ದೇಶದ ಬಡವರ ಹೊಟ್ಟೆ ತುಂಬಿಸುವ ಕೆಲಸ ಮಾಡಿತ್ತು. ಆದರೆ ಬಿಜೆಪಿ ಜಿಎಸ್‌ಟಿ, ಬೆಲೆ ಏರಿಕೆ, ನೋಟ್ ಬ್ಯಾನ್ ಮತ್ತಿತ್ತರ ವಿಷಯಗಳಿಂದ ಜನರನ್ನು ಮೂರ್ಖತನ್ನಾಗಿಸುತ್ತಿದೆ. ಇದರ ಬಗ್ಗೆ ಜನರು ಜಾಗೃತರಾಗಬೇಕೆಂದು ಕರೆ ನೀಡಿದರು.

ಹೊಸ ಕಾಯ್ದೆಯ ಕುರಿತು ಸಂಸತ್ತಿನಲ್ಲಿ ಯಾವುದೇ ರೀತಿಯ ಚರ್ಚೆ ನಡೆಸದೆ ಬಿಜೆಪಿ ಜಾರಿ ಮಾಡಿದೆ. ಇದೊಂದು ಪ್ರಜಾಪ್ರಭುತ್ವದ ವಿರೋಧಿ ಧೋರಣೆಯಾಗಿದೆ. ನೂರು ದಿನದ ಉದ್ಯೋಗ ಖಾತ್ರಿಯನ್ನು 125 ದಿನಕ್ಕೆ ಹೆಚ್ಚಿಸುವುದಾಗಿ ಹೇಳುತ್ತಾ ರಾಜ್ಯ ಸರಕಾರಗಳ ಮೇಲೆ ಶೇಕಡಾ 40ರಷ್ಟು ಭಾರ ಹಾಕುತ್ತಿದೆ. ಮೊದಲೇ ಆರ್ಥಿಕ ಕಷ್ಟದಲ್ಲಿರುವ ರಾಜ್ಯಗಳಿಗೆ ಇದು ದೊಡ್ಡ ಹೊಡೆತವಾಗಲಿದೆ ಎಂದು ಹೇಳಿದ್ದಾರೆ.

ನೂತನ ಕಾಯ್ದೆ ಜಾರಿಗೊಳಿಸುತ್ತಿರುವುದನ್ನು ಖಂಡಿಸಿ ಇದೇ ಜ.27ರಿಂದ ಫೆಬ್ರುವರಿ 7ರವರೆಗೆ ತಾಲೂಕಾ ಮಟ್ಟದಲ್ಲಿ, ಜ.31ರಿಂದ ಫೆಬ್ರವರಿ 6ರವರೆಗೆ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಸರಕಾರದ ನೀತಿ ವಿರುದ್ಧ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ಶಹನಾಜ್ ಅಖ್ತರ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News