×
Ad

ಮನುವಾದಿ ವಕೀಲ ರಾಕೇಶ್ ಕಿಶೋರ್‌ಗೆ ಗಲ್ಲು ಶಿಕ್ಷೆ ವಿಧಿಸಲು ಗುಲಬರ್ಗಾ ನ್ಯಾಯವಾದಿಗಳ ಸಂಘ ಆಗ್ರಹ

ಕೆಂಪು ಪಟ್ಟಿ ಧರಿಸಿ ಪ್ರತಿಭಟನೆಗೆ ಇಳಿದ ವಕೀಲರು

Update: 2025-10-08 21:27 IST

ಕಲಬುರಗಿ: ಸಿಜೆಐ ಬಿ.ಆರ್.ಗವಾಯಿ ಮೇಲೆ ಶೂ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಕೀಲ ರಾಕೇಶ್ ಕಿಶೋರ್ ಗೆ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕೆಂದು ಗುಲಬರ್ಗಾ ನ್ಯಾಯವಾದಿಗಳ ಸಂಘದ ಜಿಲ್ಲಾ ಘಟಕ ಹಾಗೂ ಹೈಕೋರ್ಟ್ ಘಟಕ ಜಂಟಿಯಾಗಿ ಪ್ರತಿಭಟನೆ ನಡೆಸಿ, ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.

ಬುಧವಾರ ತೋಳಿಗೆ ಕೆಂಪು ಪಟ್ಟಿ ಧರಿಸಿ ಪ್ರತಿಭಟನೆಗೆ ಇಳಿದ ನೂರಾರು ವಕೀಲರು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಜಿಲ್ಲಾಧಿಕಾರಿಗಳ ಪರವಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರ ಮುಖಾಂತರ ಮನವಿ ಸಲ್ಲಿಸಿದರು.

ನಗರದ ಜಿಲ್ಲಾ ಕೋರ್ಟ್ ಸಂಕೀರ್ಣದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ವಕೀಲರು, ಸರ್ದಾರ್ ವಲ್ಲಭ್ ಭಾಯ್ ಪಟೇಲ್ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಆರೋಪಿ ವಕೀಲ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗುತ್ತ ರ‍್ಯಾಲಿ ನಡೆಸಿದರು.

ಬಳಿಕ ಡಿ.ಸಿ ಕಚೇರಿ ಎದುರು ಕೆಲಕಾಲ ರಸ್ತೆ ತಡೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಹೈಕೋರ್ಟ್ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಗೌರೀಶ್ ಕಾಶೆಂಪುರ, ಸಂವಿಧಾನ ಘನತೆ ಹೆಚ್ಚಿಸುವ ವಕೀಲನೊಬ್ಬ ನ್ಯಾಯಮೂರ್ತಿಗಳಿಗೆ ಅಪಮಾನ ಮಾಡುವ ಕೆಲಸ ಮಾಡಿದ್ದಾನೆ. ಅಂಥವನಿಗೆ ಔದಾರ್ಯದಿಂದ ನ್ಯಾಯಮೂರ್ತಿಗಳು ಕ್ಷಮಿಸಿರಬೇಕು, ಆದರೆ ಸಂಸ್ಥೆ ಶಾಶ್ವತ ಇರುತ್ತದೆ, ಆ ನೀಚ ವಕೀಲನಿಗೆ ನ್ಯಾಯಪೀಠ ಕ್ಷಮಿಸುವುದಿಲ್ಲ. ಸಂವಿಧಾನದ ರಕ್ಷಣೆಗಾಗಿ ಈ ಕಪ್ಪು ಕೋಟ್ ಹಾಕಿದ್ದೇವೆ. ಅದನ್ನು ರಕ್ಷಿಸುವ ಕೆಲಸ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಇದೇ ವೇಳೆಯಲ್ಲಿ ನೂರಾರು ವಕೀಲರು ಜಾತಿವಾದಿ, ಮನುವಾದಿ ವಕೀಲನಿಗೆ ಗಲ್ಲು ಶಿಕ್ಷೆ ಆಗಲೇಬೇಕು ಎಂಬಿತ್ಯಾದಿ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶಗಳನ್ನು ಹೊರಹಾಕಿದರು.

ಪ್ರತಿಭಟನೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಎಸ್.ವಿ.ಪಸಾರ, ಉಪಾಧ್ಯಕ್ಷರಾದ ಭೀಮಾಶಂಕರ ಪೂಜಾರಿ, ಖಂಜಾಚಿ ಮಂಜುನಾಥ ಪಾಟೀಲ, ಪ್ರಧಾನ ಕಾರ್ಯದರ್ಶಿ ಸಿದ್ದರಾಮ ವಾಡಿ, ಸುಧೀರ ಗಾದಗೆ, ಹೈಕೋರ್ಟ್ ಘಟಕದ ಉಪಾಧ್ಯಕ್ಷ ಅನಂತ ಜಾಹಗೀರದಾರ, ಪ್ರಧಾನ ಕಾರ್ಯದರ್ಶಿ ಗೌರೀಶ ಕಾಶೆಂಪುರ, ಅಶ್ವಿನಿ ಮದನಕರ್, ನಾಗೇಂದ್ರ ಜವಳಿ, ಧರ್ಮಣ್ಣ ಕೋಣೆಕರ, ಜಯಶೀಲಾ, ಶ್ರೀಮಂತ, ಮಂಜುನಾಥ ಗಿನ್ನಿ, ರೇಖಾ ಪಾಟೀಲ, ಶ್ರವಣಕುಮಾರ, ವಿನೋದಕುಮಾರ ಕಾಂಬ್ಳೆ, ಆರತಿ ಎಂ.ರಾಠೋಡ, ವಿನೋದಕುಮಾರ ಜನೆವರಿ, ಸೇರಿದಂತೆ ಹಲವರು ಪಾಲ್ಗೊಂಡಿದ್ದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News