ಕಲಬುರಗಿ | ವಿದ್ಯಾರ್ಥಿನಿ ಮೇಲೆ ವಾರ್ಡನ್ ಹಲ್ಲೆ ಆರೋಪ; ಹಾಸ್ಟೆಲ್ ಗೆ ಭೇಟಿ ನೀಡಿದ ಜನವಾದಿ ಸಂಘಟನೆ
ಕಲಬುರಗಿ: ನಗರ ಹೈಕೋರ್ಟ್ ರಿಂಗ್ ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಶ್ರೀಮತಿ ಇಂದಿರಾಗಾಂಧಿ ಮಹಿಳಾ ನರ್ಸಿಂಗ್ ವಸತಿ ನಿಲಯದ ವಿದ್ಯಾರ್ಥಿನಿಗೆ ಹಾಸ್ಟೆಲ್ ವಾರ್ಡನ್ ವೊಬ್ಬರು ಹಲ್ಲೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸುದ್ದಿ ಪ್ರಕಟ ಬೆನ್ನಲ್ಲೇ ಶುಕ್ರವಾರ ಪ್ರಜ್ಞಾ ಕಾನೂನು ಸಲಹಾ ಸಮಿತಿ ಮತ್ತು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ನಿಯೋಗವು ಭೇಟಿ ನೀಡಿದೆ.
ಅರ್ಚನಾ ಎಂಬ ವಾರ್ಡನ್ ಅವರು ವಿದ್ಯಾರ್ಥಿನಿ ದೇವಮ್ಮ ಅವರ ಮೇಲೆ ಹಲ್ಲೆ ನಡೆಸಿದ್ದಾರೆನ್ನಲಾಗಿದ್ದು, ಈ ಕುರಿತು ಮಾಹಿತಿ ಪಡೆದುಕೊಂಡರು.
ಹಾಸ್ಟೆಲ್ ನಲ್ಲಿ ಸಿಸಿ ಕ್ಯಾಮೆರಾ ಇಲ್ಲದಿರುವುದು. ಉತ್ತಮ ಗುಣಮಟ್ಟದ ಪೌಷ್ಟಿಕ ಆಹಾರ ಕೊಡುತ್ತಿಲ್ಲ, ತಿಂಗಳ ಋತುಸ್ರಾವ ಹೊತ್ತಲ್ಲಿ ಉಪಯೋಗಿಸಲು ಸ್ಯಾನಿಟರಿ ಪ್ಯಾಡ್ ಮತ್ತು ಬಳಸಿದ ಪ್ಯಾಡ್ ಸುಡುವ ಯಂತ್ರ ಅಳವಡಿಕೆ ಇಲ್ಲ. ಅಗತ್ಯಕ್ಕೆ ತಕ್ಕ ಮಂಚ ಹಾಸಿಗೆ ಇಲ್ಲ, ಅತ್ಯಂತ ಚಿಕ್ಕ ಕೋಣೆಯಲ್ಲಿ 14 ಜನ ವಿದ್ಯಾರ್ಥಿನಿಯರು ನೆಲದ ಮೇಲೆ ಮಲಗಬೇಕು, ಶೌಚಾಲಯ ಸ್ನಾನದ ಕೋಣೆಗಳ ನಿರಂತರ ಶುಚಿತ್ವಕ್ಕಾಗಿ ಸರಿಯಾದ ವ್ಯವಸ್ಥೆ ಇಲ್ಲದಿರುವುದು ಕಂಡು ಬಂದಿದೆ ಎಂದು ನಿಯೋಗ ತನ್ನ ಭೇಟಿಯ ಬಳಿಕ ಹೇಳಿಕೊಂಡಿದೆ. ತಕ್ಷಣವೇ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿದೆ.
ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಅಧ್ಯಕ್ಷೆ ಮತ್ತು ಪ್ರಜ್ಞಾ ಕಾನೂನು ಸಲಹಾ ಸಮಿತಿಯ ಅಧ್ಯಕ್ಷೆ ಡಾ.ಮೀನಾಕ್ಷಿ ಬಾಳಿ, ರಾಜ್ಯ ಉಪಾಧ್ಯಕ್ಷ ಕೆ ನೀಲಾ, ಶಾಂತಾ ಘಂಟಿ ಎಸ್ ಎಫ್ ಐ ನ ಜಿಲ್ಲಾ ಕಾರ್ಯದರ್ಶಿ ಸುಜಾತಾ ಮತ್ತಿತರರು ನಿಯೋಗದಲ್ಲಿದ್ದರು.