ಕಲಬುರಗಿ | ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 17,500 ಕೆಜಿ ‘ಅನ್ನಭಾಗ್ಯ’ ಅಕ್ಕಿ ಜಪ್ತಿ
Update: 2026-06-27 18:32 IST
ಅಫಜಲಪುರ: ಕಾಳಸಂತೆಯಲ್ಲಿ ಖರೀದಿಸಿ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಸರ್ಕಾರದ ‘ಅನ್ನಭಾಗ್ಯ’ ಯೋಜನೆಯ 17,500 ಕೆಜಿ ಅಕ್ಕಿಯನ್ನು ಆಹಾರ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿವೆ.
ಪಟ್ಟಣದ ಬಸವೇಶ್ವರ ವೃತ್ತದ ಬಳಿ ಖಚಿತ ಮಾಹಿತಿಯ ಆಧಾರದ ಮೇಲೆ ಅಧಿಕಾರಿಗಳು ವಾಹನವನ್ನು ತಡೆದು ಪರಿಶೀಲನೆ ನಡೆಸಿದ ವೇಳೆ, ತಲಾ 50 ಕೆಜಿ ತೂಕದ 350 ಚೀಲಗಳಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ಪತ್ತೆಯಾಗಿದೆ. ಜಪ್ತಿ ಮಾಡಿದ ಅಕ್ಕಿಯ ಒಟ್ಟು ತೂಕ 17,500 ಕೆಜಿ ಆಗಿದ್ದು, ಅದರ ಅಂದಾಜು ಮೌಲ್ಯ ಸುಮಾರು 5.95 ಲಕ್ಷ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೇರಟಗಿ, ಮೋರಟಗಿ, ಘತ್ತರಗಿ ಹಾಗೂ ಅಫಜಲಪುರ ಮಾರ್ಗವಾಗಿ ಈ ಅಕ್ಕಿಯನ್ನು ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ದಾಳಿಯ ವೇಳೆ ಅಕ್ರಮ ಸಾಗಣೆಗೆ ಬಳಸಲಾಗುತ್ತಿದ್ದ ವಾಹನವನ್ನು ಸಹ ವಶಕ್ಕೆ ಪಡೆಯಲಾಗಿದೆ.
ಈ ಸಂಬಂಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.