×
Ad

ಕಲಬುರಗಿ | ಹೆಚ್ಚಿನ ಬಡ್ಡಿ ಆಸೆ ತೋರಿಸಿ 1.30 ಕೋಟಿ ರೂ. ಹೂಡಿಕೆ ವಂಚನೆ ಆರೋಪ: ಫೈನಾನ್ಸ್ ಸಂಸ್ಥೆ ಸೇರಿ 16 ಮಂದಿ ವಿರುದ್ಧ ಎಫ್ ಐ ಆರ್ ದಾಖಲು

Update: 2025-07-31 19:21 IST

ಕಲಬುರಗಿ: ನಗರದ ರೋಝಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವರ್ಷಕ್ಕೆ ಶೇ.12ರ ದರದಲ್ಲಿ ಬಡ್ಡಿ ಪಾವತಿಸುವುದಾಗಿ ಹೇಳಿ ಫೈನಾನ್ಸ್‌ ಸಂಸ್ಥೆಯೊಂದರಲ್ಲಿ, ನಿವೃತ್ತ ನೌಕರರೊಬ್ಬರಿಂದ ಹಂತ–ಹಂತವಾಗಿ 1.30 ಕೋಟಿ ರೂ. ಹೂಡಿಕೆ ಮಾಡಿಸಿ ವಂಚಿಸಿದ ಘಟನೆ ನಡೆದಿದೆ.

ಎಂ.ಬಿ.ನಗರದ ಲಕ್ಷ್ಮಿ ದೇವಸ್ಥಾನ ಪ್ರದೇಶದ ನಿವಾಸಿ, ನಿವೃತ್ತ ನೌಕರ ಚಂದ್ರಕಾಂತ ಖೂಬಾ ವಂಚನೆಗೆ ಒಳಗಾದ ವ್ಯಕ್ತಿ ಎಂದು ತಿಳಿದುಬಂದಿದೆ.

'ಸುವರ್ಣ ಫೈನಾನ್ಸ್ ಸಂಸ್ಥೆಯವರು ಚಂದ್ರಕಾಂತ ಅವರಿಂದ ಮೊದಲ ಹಂತದಲ್ಲಿ 2022ರ ಏ.1ರಂದು 30 ಲಕ್ಷ ರೂ. ಹೂಡಿಕೆ ಮಾಡಿಸಿಕೊಂಡಿದ್ದಾರೆ. ಬಳಿಕ ಚಂದ್ರಕಾಂತ ಅವರು ಪತ್ನಿ ಹಾಗೂ ಮಗನ ಹೆಸರಿನಲ್ಲಿ ತಲಾ 30 ಲಕ್ಷ ರೂ. ಹೂಡಿಕೆ ಮಾಡಿಸಿದ್ದಾರೆ. ಅದಾದ ನಂತರ ತಮ್ಮ ಇಬ್ಬರು ಹೆಣ್ಣು ಮಕ್ಕಳ ಹೆಸರಿನಲ್ಲಿ ತಲಾ 20 ಲಕ್ಷ ರೂ. ಹೂಡಿಕೆ ಮಾಡಿಸಿದ್ದಾರೆ. ಮೊದಲಿಗೆ ನಿಯಮಿತವಾಗಿ ಬಡ್ಡಿ ನೀಡಿದ ಫೈನಾನ್ಸ್ ಸಂಸ್ಥೆಯು 2024ರ ಮಾರ್ಚ್‌ನಿಂದ ಬಡ್ಡಿ ಪಾವತಿಯನ್ನು ನಿಲ್ಲಿಸಿದೆ. ಫೈನಾನ್ಸ್ ತುಸು ನಷ್ಟದಲ್ಲಿದ್ದು, ನಂತರ ಬಡ್ಡಿ ಪಾವತಿಸುವುದಾಗಿ ಹೇಳಿದೆ. ಕೆಲವು ದಿನಗಳ ಬಳಿಕ ಚಂದ್ರಕಾಂತ ಹೂಡಿಕೆ ಹಣ ಮರಳಿಸುವಂತೆ ಕೇಳಿದ್ದಾರೆ. ಆಗ ಒಂದಿಷ್ಟು ಹಣವನ್ನು ಸಂಸ್ಥೆ ಮರಳಿಸಿದೆ. ಇನ್ನೂ 65 ಲಕ್ಷ ಹಣ ರೂ. ವಾಪಸ್ ಕೊಡದೆ ವಂಚನೆ ಮಾಡಲಾಗಿದೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುವರ್ಣ ಫೈನಾನ್ಸ್ ಸಂಸ್ಥೆ ಸೇರಿದಂತೆ ಒಟ್ಟು 16 ಮಂದಿ ವಿರುದ್ಧ ರೋಝಾ ಪೊಲೀಸ್‌ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News