Kalaburagi | ಮಹಾದೇವಪ್ಪ ಕಡೇಚೂರ್ ಕೃತಿಗಳು ವಿದ್ಯಾರ್ಥಿಗಳಿಗೆ ತಲುಪಿಸುವ ಕಾರ್ಯ ಶ್ಲಾಘನೀಯ : ಬಿ.ಎಚ್.ನಿರಗುಡಿ

ಪುಸ್ತಕ ವಿತರಣಾ ಅಭಿಯಾನಕ್ಕೆ ಚಾಲನೆ

Update: 2026-07-24 21:07 IST

ಕಲಬುರಗಿ: ಸ್ವಾತಂತ್ರ್ಯ ಹೋರಾಟಗಾರ ಹಾಗೂ ಸಾಹಿತಿ ಮಹಾದೇವಪ್ಪ ಕಡೇಚೂರ್ ಅವರ ಕೃತಿಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಕಾರ್ಯವು ಹಿರಿಯರ ಚಿಂತನೆ, ಸಂಸ್ಕಾರ ಮತ್ತು ಜ್ಞಾನವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಸೇವೆಯಾಗಿದೆ ಎಂದು ಕರ್ನಾಟಕ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್. ನಿರಗುಡಿ ಹೇಳಿದರು.

ನಗರದ ಸೇಡಂ ರಸ್ತೆಯಲ್ಲಿರುವ ಶ್ರೀ ಕಾಮರಾಜ್ ನಾಡಾರ್ ಹಿರಿಯ ಪ್ರಾಥಮಿಕ ಶಾಲೆಯ ಗ್ರಂಥಾಲಯದಲ್ಲಿ ಶ್ರೀಮತಿ ಬಾಲಮ್ಮ ಮಹಾದೇವಪ್ಪ ಕಡೇಚೂರ್ ಟ್ರಸ್ಟ್ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಮಹಾದೇವಪ್ಪ ಕಡೇಚೂರ್ ಅವರ ಕೃತಿಗಳ ವಿತರಣಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸೇವಕ ಹಾಗೂ ಸಾಹಿತಿಯಾಗಿ ಮಹಾದೇವಪ್ಪ ಕಡೇಚೂರ್ ಅವರು ಸಲ್ಲಿಸಿದ ಸೇವೆ ಅಪಾರವಾಗಿದೆ. ಅವರ ಸಾಹಿತ್ಯ ಕೃತಿಗಳು ಮಕ್ಕಳಲ್ಲಿ ಸಂಸ್ಕಾರ, ಮಾನವೀಯ ಮೌಲ್ಯಗಳು ಮತ್ತು ನೀತಿ ತತ್ವಗಳನ್ನು ಬೆಳೆಸುವಂತಿವೆ. ಇಂತಹ ಮೌಲಿಕ ಕೃತಿಗಳ ಮೂಲಕ ಜ್ಞಾನದ ಪ್ರಸಾರವಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಕೈಗೆ ಈ ಕೃತಿಗಳು ತಲುಪಿ ಅಭಿಯಾನ ಯಶಸ್ವಿಯಾಗಲಿ ಎಂದು ಅವರು ಆಶಿಸಿದರು.

ಪುಸ್ತಕ ಪ್ರಾಧಿಕಾರದಿಂದ ಪ್ರಸ್ತುತ ಪಿಯು ಹಾಗೂ ಪದವಿ ಕಾಲೇಜುಗಳ ಗ್ರಂಥಾಲಯಗಳಿಗೆ 25 ಸಾವಿರ ರೂ. ಮೌಲ್ಯದ ಪುಸ್ತಕಗಳನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೂ ವಿಸ್ತರಿಸುವ ಚಿಂತನೆ ಇದೆ. ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದ 30 ಪಿಯು ಹಾಗೂ ಪದವಿ ಕಾಲೇಜುಗಳಿಗೆ ಪುಸ್ತಕಗಳನ್ನು ವಿತರಿಸಲಾಗಿದೆ. ಸರ್ಕಾರ ಮಾಡಬೇಕಾದ ಕಾರ್ಯವನ್ನು ಶ್ರೀಮತಿ ಬಾಲಮ್ಮ ಮಹಾದೇವಪ್ಪ ಕಡೇಚೂರ್ ಟ್ರಸ್ಟ್ ಕೈಗೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.

ಟ್ರಸ್ಟ್ ಸದಸ್ಯ ಡಾ. ಸದಾನಂದ ಪೆರ್ಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಪುಸ್ತಕ ವಿತರಣಾ ಅಭಿಯಾನವನ್ನು ಪ್ರತಿ ತಿಂಗಳು ನಡೆಸಲಾಗುವುದು. ಸರ್ಕಾರಿ ಶಾಲೆಗಳ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಹಸ್ತಾಂತರಿಸುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಕಾಮರಾಜ್ ನಾಡಾರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನರಸಯ್ಯ ಗುತ್ತೇದಾರ್ ಮಾತನಾಡಿ ಶುಭ ಹಾರೈಸಿದರು. ಶಾಲೆಯ ಮುಖ್ಯಗುರು ರೇಣುಕಾ ಅಶೋಕ್ ಸಂಕಲಾಪುರ ಹಾಗೂ ಕಾಮಧೇನು ಮಹಿಳಾ ಸಂಘದ ಕಾರ್ಯದರ್ಶಿ ಜ್ಯೋತಿ ರಾಜು ಗುತ್ತೇದಾರ್ ಮಾತನಾಡಿದರು.

ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಾಜೇಶ್ ದತ್ತು ಗುತ್ತೇದಾರ್, ಮಹೇಶ್ ಎಂ. ಕಡೇಚೂರ್, ದಿನೇಶ್ ಎಂ. ಕಡೇಚೂರ್, ಅಶೋಕ್ ಸಂಕಲಾಪುರ, ಮಲ್ಲಿಕಾರ್ಜುನ ಕುಕ್ಕುಂದಿ, ಡಾ. ವಿಜಯಕುಮಾರ ಫರೂತೆ, ರೇವಣಸಿದ್ದಪ್ಪ ದುಕಾನ, ಕಲಾವಿದ ಶಿವಕುಮಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News