Kalaburagi | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ: ವಿಜಯಕುಮಾರ ರೋಣದ

ಕರ್ನಾಟಕ ಸಾಹಿತ್ಯ ಅಕಾಡೆಮಿ ಕಾರ್ಯಕ್ರಮದಲ್ಲಿ ಪರಿಸರ ಜಾಗೃತಿಗೆ ಕರೆ

Update: 2026-07-24 20:52 IST

ಕಲಬುರಗಿ: ಪರಿಸರದ ಮೇಲಿನ ನಿರ್ಲಕ್ಷ್ಯದಿಂದ ಪ್ರಕೃತಿಯಲ್ಲಿ ಹಲವು ಬದಲಾವಣೆಗಳಾಗುತ್ತಿದ್ದು, ಮಳೆಯ ಪ್ರಮಾಣವೂ ಕಡಿಮೆಯಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದು ಸಾಹಿತಿ ವಿಜಯಕುಮಾರ ರೋಣದ ಹೇಳಿದರು.

ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ವತಿಯಿಂದ ಚಕೋರ ಸಾಹಿತ್ಯ ವೇದಿಕೆ ಅಡಿಯಲ್ಲಿ ಆಯೋಜಿಸಿದ್ದ ‘ಯಾತಕ್ಕ ಮಳೆ ಹೋದವೋ’ ವಿಷಯದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪರಿಸರ ಹಾನಿಯಿಂದ ಮಳೆ ದೂರವಾಗುತ್ತಿದೆ ಎಂದು ಹೇಳಿದ ಅವರು, ನಿಸರ್ಗದ ಬಗ್ಗೆ ಪ್ರೀತಿ ಬೆಳೆಸಿಕೊಳ್ಳುವುದು, ಹೆಚ್ಚಿನ ಸಂಖ್ಯೆಯಲ್ಲಿ ಗಿಡ-ಮರಗಳನ್ನು ನೆಡುವುದು, ಹೂದೋಟ ನಿರ್ಮಾಣ, ಮಾಲಿನ್ಯ ನಿಯಂತ್ರಣ, ಶಕ್ತಿ ಬಳಕೆಯಲ್ಲಿ ಮಿತವ್ಯಯ ಹಾಗೂ ವನಮಹೋತ್ಸವದಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಅಗತ್ಯ ಎಂದು ತಿಳಿಸಿದರು.

ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಕೊಡುಗೆ ನೀಡಿದ ಸುಂದರ್‌ಲಾಲ್ ಬಹುಗುಣ, ನಾಗೇಶ್ ಹೆಗಡೆ, ಸಾಲುಮರದ ತಿಮ್ಮಕ್ಕ, ಮೇಧಾ ಪಾಟ್ಕರ್ ಹಾಗೂ ಸುರೇಶ್ ಹೆಬ್ಳಿಕರ್ ಅವರ ಕಾರ್ಯಗಳನ್ನು ಅವರು ಸ್ಮರಿಸಿದರು.

ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಡಾ. ಗವಿಸಿದ್ದಪ್ಪ ಎಚ್. ಪಾಟೀಲ್ ಮಾತನಾಡಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಸಿದ್ಧರಾಮ ಹೊನ್ಕಲ್ ಆಶಯ ನುಡಿಗಳನ್ನಾಡಿ, ವಿದ್ಯಾರ್ಥಿಗಳು ಪರಿಸರ ಪ್ರೇಮ ಬೆಳೆಸಿಕೊಳ್ಳಬೇಕು. ತಮ್ಮ ಮನೆಗಳ ಸುತ್ತಮುತ್ತ ಗಿಡಗಳನ್ನು ನೆಟ್ಟು ಬೆಳೆಸುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ವಿದ್ಯಾರ್ಥಿಗಳು ಮೊಬೈಲ್ ಹಾಗೂ ದೂರದರ್ಶನದ ದುಷ್ಪರಿಣಾಮಗಳಿಗೆ ಒಳಗಾಗದೆ, ಬಸವಾದಿ ಶರಣರು ಹಾಗೂ ಇತರ ಲೇಖಕರ ಸಾಹಿತ್ಯ ಕೃತಿಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಜಡ್.ಎನ್. ಜಾಗಿರ್ದಾರ್ ಅಧ್ಯಕ್ಷತೆ ವಹಿಸಿದ್ದರು. ನಾಗರತ್ನ ಇಂಡೆ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News