Kalaburagi | ಅನುದಾನಿತ ನೌಕರರ ಕಾಲ್ಪನಿಕ ವೇತನ ಹೋರಾಟಕ್ಕೆ ಜಯ: ಶಶೀಲ್ ಜಿ.ನಮೋಶಿ

ಹೈಕೋರ್ಟ್ ತೀರ್ಪು ಸ್ವಾಗತಿಸಿದ ಎಂಎಲ್‌ಸಿ; ಪಿಂಚಣಿ ಸೇರಿ ಸೌಲಭ್ಯಗಳನ್ನು ಶೀಘ್ರ ಜಾರಿಗೆ ತರಲು ಒತ್ತಾಯ

Update: 2026-07-24 21:15 IST

ಕಲಬುರಗಿ: ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಕಾಲ್ಪನಿಕ ವೇತನ ಹಾಗೂ ಪಿಂಚಣಿ ಸೌಲಭ್ಯಗಳ ಕುರಿತ ದೀರ್ಘಕಾಲದ ಹೋರಾಟಕ್ಕೆ ಕೊನೆಗೂ ನ್ಯಾಯ ದೊರೆತಿದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ದಶಕಗಳ ಹೋರಾಟಕ್ಕೆ ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪು ನ್ಯಾಯ ಒದಗಿಸಿದೆ ಎಂದು ತಿಳಿಸಿದ್ದಾರೆ.

ಅನುದಾನಿತ ನೌಕರರ ಕಾಲ್ಪನಿಕ ವೇತನ ಹಾಗೂ ಇತರೆ ಸೌಲಭ್ಯಗಳಿಗಾಗಿ ತಾವು ಸದನದ ಒಳಗೂ ಹೊರಗೂ ನಿರಂತರವಾಗಿ ಹೋರಾಟ ನಡೆಸಿ ಸರ್ಕಾರದ ಗಮನ ಸೆಳೆಯುತ್ತ ಬಂದಿದ್ದೆ. ಆದರೆ, ಪ್ರಕರಣ ನ್ಯಾಯಾಲಯದಲ್ಲಿದೆ ಎಂಬ ಕಾರಣ ನೀಡಿ ಸರ್ಕಾರ ಸೌಲಭ್ಯಗಳ ಜಾರಿಗೆ ವಿಳಂಬ ಮಾಡುತ್ತಿತ್ತು ಎಂದು ಅವರು ಹೇಳಿದ್ದಾರೆ.

ಹೈಕೋರ್ಟ್ ವಿಭಾಗೀಯ ಪೀಠವು ಈ ಹಿಂದೆ ಏಕಸದಸ್ಯ ಪೀಠ ಅನುದಾನಿತ ನೌಕರರ ಪರವಾಗಿ ನೀಡಿದ್ದ ಆದೇಶವನ್ನು ಎತ್ತಿಹಿಡಿದು, ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸಿರುವುದು ನೌಕರರ ಹಿತ ಕಾಪಾಡಿದ ಮಹತ್ವದ ತೀರ್ಪಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರವು ಹೈಕೋರ್ಟ್ ತೀರ್ಪನ್ನು ಗೌರವಿಸಿ, ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು ಅನುದಾನ ರಹಿತ ಅವಧಿಯಲ್ಲಿ ಸಲ್ಲಿಸಿದ ಹಿಂದಿನ ಸೇವೆಯನ್ನು ಪರಿಗಣಿಸಿ, ಅದರ ಆಧಾರದ ಮೇಲೆ ಪಿಂಚಣಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಶೀಘ್ರವಾಗಿ ಜಾರಿಗೆ ತರಬೇಕು ಎಂದು ಶಶೀಲ್ ಜಿ. ನಮೋಶಿ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News