Kalaburagi | ಆ.18ರಂದು ವಿವಾಹ ಮತ್ತು ಲಿವ್-ಇನ್ ಸಂಬಂಧಗಳ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ

Update: 2026-07-24 21:00 IST

ಕಲಬುರಗಿ: ವಿವಾಹ ಹಾಗೂ ಲಿವ್-ಇನ್ ಸಂಬಂಧಗಳ ಕಾನೂನುಬದ್ಧತೆ, ಸಾಮಾಜಿಕ ಪರಿಣಾಮಗಳು ಮತ್ತು ಸಾಂಸ್ಕೃತಿಕ ಆಯಾಮಗಳ ಕುರಿತು ಚರ್ಚಿಸಲು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ)ಯ ಕಾನೂನು ವಿಭಾಗ ಹಾಗೂ ವಿಜ್ಞಾನೇಶ್ವರ ಪ್ರತಿಷ್ಠಾನ ಟ್ರಸ್ಟ್ ಸಹಯೋಗದಲ್ಲಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.

‘ಸಹಜೀವನದ ವಿಕಸನ: ವಿವಾಹ ಮತ್ತು ಲಿವ್-ಇನ್ ಸಂಬಂಧಗಳಲ್ಲಿನ ಪಾವಿತ್ರ್ಯ, ಕಾನೂನುಬದ್ಧತೆ ಹಾಗೂ ಸಾಮಾಜಿಕ ಆಯಾಮಗಳು’ ಎಂಬ ವಿಷಯದ ಕುರಿತು ನಡೆಯಲಿರುವ ವಿಚಾರ ಸಂಕಿರಣವು 2026ರ ಆಗಸ್ಟ್ 18ರಂದು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿದೆ.

ವಿಚಾರ ಸಂಕಿರಣದ ಪೂರ್ವಭಾವಿಯಾಗಿ ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ್ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಕಾನೂನು ಅಧ್ಯಯನ ನಿಕಾಯದ ಡೀನ್ ಪ್ರೊ. ಬಸವರಾಜ ಎಂ. ಕುಬಕಡ್ಡಿ, ಕಾನೂನು ವಿಭಾಗದ ಮುಖ್ಯಸ್ಥ ಡಾ. ಅನಂತ ಡಿ. ಚಿಂಚುರೆ, ವಿಚಾರ ಸಂಕಿರಣದ ಸಂಚಾಲಕಿ ಡಾ. ರೇಣುಕಾ ಎಸ್. ಗುಬ್ಬೇವಾಡ್ ಸೇರಿದಂತೆ ವಿಭಾಗದ ಅಧ್ಯಾಪಕರು ಉಪಸ್ಥಿತರಿದ್ದರು.

ವಿಚಾರ ಸಂಕಿರಣದಲ್ಲಿ ಶಿಕ್ಷಣ ತಜ್ಞರು, ಸಂಶೋಧಕರು, ಕಾನೂನು ವೃತ್ತಿಪರರು, ನ್ಯಾಯಾಂಗ ಅಧಿಕಾರಿಗಳು, ನೀತಿ ನಿರೂಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ವಿವಾಹ ವ್ಯವಸ್ಥೆಯ ಕಾನೂನು ನಿಯಮಗಳು, ಸಹಜೀವನದ ಬೆಳವಣಿಗೆ, ಲಿವ್-ಇನ್ ಸಂಬಂಧಗಳು, ಮಹಿಳೆಯರ ಘನತೆ ಮತ್ತು ಹಕ್ಕುಗಳು, ಸಪ್ತಪದಿ, ಆರ್ಥಿಕ ಸ್ವಾಯತ್ತತೆ ಹಾಗೂ ಸಾಂಪ್ರದಾಯಿಕ ಪದ್ಧತಿಗಳು ಮತ್ತು ಆಧುನಿಕ ಕಾನೂನಿನ ನಡುವಿನ ಸಂಬಂಧಗಳ ಕುರಿತು ಚರ್ಚೆ ನಡೆಯಲಿದೆ.

ಸಂಶೋಧನಾ ಪ್ರಬಂಧ ಮಂಡಿಸಲು ಆಸಕ್ತರಿಗೆ ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ಅವಕಾಶ ಕಲ್ಪಿಸಲಾಗಿದೆ. ವಿಸ್ತೃತ ಸಾರಾಂಶ ಸಲ್ಲಿಕೆಗೆ ಆಗಸ್ಟ್ 8 ಕೊನೆಯ ದಿನವಾಗಿದ್ದು, ನೋಂದಣಿಗೆ ಆಗಸ್ಟ್ 15 ಅಂತಿಮ ದಿನವಾಗಿದೆ.

ವಿಚಾರ ಸಂಕಿರಣದ ನೋಂದಣಿ ಶುಲ್ಕವನ್ನು ಶಿಕ್ಷಣ ತಜ್ಞರು ಹಾಗೂ ಕಾನೂನು ವೃತ್ತಿಪರರಿಗೆ 500 ರೂ., ಸಂಶೋಧನಾ ವಿದ್ಯಾರ್ಥಿಗಳಿಗೆ 300 ರೂ. ಹಾಗೂ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 200 ರೂ. ನಿಗದಿಪಡಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಿಯುಕೆ ಸಂಶೋಧನಾ ವಿದ್ಯಾರ್ಥಿಗಳಾದ ಲಗಿಡಿ ಅರುಣ್ ಕುಮಾರ್ ರಾಜು, ರೋಹಿತ್ ಟಿ. ಹಾಗೂ ವಿಜ್ಞಾನೇಶ್ವರ ಪ್ರತಿಷ್ಠಾನ ಟ್ರಸ್ಟ್‌ನ ಮಹಾದೇವಯ್ಯ ಕರದಳ್ಳಿ ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News