Kalaburagi | ಬೆಳೆ ವಿಮೆ ಬಾಕಿ ಪರಿಹಾರ ಬಿಡುಗಡೆಗೆ ಆಗ್ರಹ : ಸ್ಪಂದಿಸದಿದ್ದರೆ ಹೋರಾಟದ ಎಚ್ಚರಿಕೆ

Update: 2026-08-07 17:46 IST

ಕಲಬುರಗಿ : 2025–26ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ (ಬೆಳೆ ವಿಮೆ) ಬಾಕಿ ಇರುವ ಪರಿಹಾರ ಧನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಅಫಜಲಪುರ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಅಫಜಲಪುರ ತಾಲೂಕಿನ ಬೈರಾಮಡಗಿ, ಮದರಾ (ಬಿ), ಕೋಗನೂರ, ಗುಡೂರ, ಗೌರ (ಬಿ), ಚೌಡಾಪುರ, ಬಂದರವಾಡ ಹಾಗೂ ಹಸರಗುಂಡಗಿ ಸೇರಿದಂತೆ ಎಂಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಇದುವರೆಗೆ ಬೆಳೆ ವಿಮೆ ಪರಿಹಾರ ಸಂಪೂರ್ಣವಾಗಿ ದೊರೆತಿಲ್ಲ ಎಂದು ರೈತರು ಆರೋಪಿಸಿದರು.

ವಿಶೇಷವಾಗಿ ಬೈರಾಮಡಗಿ, ಮದರಾ ಹಾಗೂ ಕೋಗನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ “ಶೂನ್ಯ ಪರಿಹಾರ” ಎಂದು ದಾಖಲಾಗಿರುವುದು ರೈತರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. 2025–26ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಬೆಳೆ ಸಂಪೂರ್ಣ ಹಾನಿಗೊಳಗಾಗಿದ್ದರೂ ಒಂದು ವರ್ಷ ಕಳೆದರೂ ಎರಡನೇ ಕಂತಿನ ಪರಿಹಾರ ಬಿಡುಗಡೆಯಾಗಿಲ್ಲ ಎಂದು ದೂರಿದರು.

ಪರಿಹಾರ ಧನ ವಿಳಂಬವಾಗಿರುವುದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಪರಿಶೀಲನೆ ನಡೆಸಿ ಅರ್ಹ ರೈತರೆಲ್ಲರಿಗೂ ಬಾಕಿ ಇರುವ ಬೆಳೆ ವಿಮೆ ಪರಿಹಾರವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಪರಿಹಾರ ವಿತರಣೆಯಲ್ಲಿ ಉಂಟಾಗಿರುವ ಲೋಪಗಳಿಗೆ ಕಾರಣರಾದ ಸಂಬಂಧಪಟ್ಟ ಸರ್ವೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ನೊಂದ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ರೈತರ ಸಮಸ್ಯೆಗೆ ಏಳು ದಿನಗಳೊಳಗೆ ಸ್ಪಂದಿಸಿ ಬಾಕಿ ಇರುವ ಪರಿಹಾರ ಧನವನ್ನು ಬಿಡುಗಡೆ ಮಾಡದಿದ್ದರೆ, ಅಫಜಲಪುರ ತಾಲೂಕಿನ ಅತನೂರ ಹೋಬಳಿ ವ್ಯಾಪ್ತಿಯ ರಾಜ್ಯ ಹೆದ್ದಾರಿ ತಡೆದು, ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಾವಿರಾರು ರೈತರೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಗುಂಡು ಪಾಟೀಲ್, ರಾಮಚಂದ್ರ ಪೊಲೀಸ್ ಪಾಟೀಲ್, ಸಂಗಯ್ಯ ಸ್ವಾಮಿ ಮಠ, ಸಿದ್ದಣ್ಣ ಹಿರಾಪುರ, ಶ್ಯಾಮಲಿಂಗ ಮೂಲಗಿ, ಶರಣಪ್ಪ ಮುಗಳಿ, ಗುರುಕಿರಣ್ ಮಾಸ್ಟರ್, ದತ್ತು ಜಮಶೆಟ್ಟಿ, ಜಗದೀಶ್ ಮೂಲಗಿ, ಗುರುಶಾಂತ್ ಹಿರಾಪುರ, ಸಿದ್ದನಗೌಡ ಮೂಲಗಿ, ಗುರುಲಿಂಗಪ್ಪ ಕರೂರ್, ಶಿವಕುಮಾರ ಜಮಾದಾರ, ರೇವಣಸಿದ್ದ ಕುಡಕ್ಕಿ ಸೇರಿದಂತೆ ಹಲವು ರೈತ ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News