Kalaburagi | ಸಾಮಾಜಿಕ ಭದ್ರತಾ ಯೋಜನೆಗಳ ಮಾಶಾಸನ ವಿತರಣೆಯಲ್ಲಿ ವಿಳಂಬ; ಆ.11ರಂದು ಪ್ರತಿಭಟನೆ
ಕಲಬುರಗಿ : ಚಿಂಚೋಳಿ ತಾಲೂಕಿನಲ್ಲಿ ಅಂಗವಿಕಲ, ವೃದ್ಧಾಪ್ಯ, ವಿಧವಾ ಹಾಗೂ ಸಂಧ್ಯಾ ಸುರಕ್ಷಾ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ ಅರ್ಹ ಫಲಾನುಭವಿಗಳಿಗೆ ಹಲವು ತಿಂಗಳಿಂದ ಮಾಶಾಸನ ದೊರೆಯುತ್ತಿಲ್ಲ ಎಂದು ಮೂಲನಿವಾಸಿ ಸಂಘಟನೆಗಳ ಒಕ್ಕೂಟದ ಮುಖಂಡ ಮಾರುತಿ ಗಂಜಗಿರಿ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಅರ್ಜಿಗಳನ್ನು ಸಮರ್ಪಕವಾಗಿ ಪರಿಶೀಲಿಸದೆ ಮಂಜೂರು ಮಾಡುತ್ತಿರುವುದು ಹಾಗೂ ಅರ್ಹ ಫಲಾನುಭವಿಗಳ ಅರ್ಜಿಗಳನ್ನು ಬಾಕಿ ಉಳಿಸಿರುವುದೇ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.
ಒಂದೇ ಯೋಜನೆಯಡಿ ಈಗಾಗಲೇ ಮಾಶಾಸನ ಪಡೆಯುತ್ತಿರುವ ಕೆಲವರಿಗೆ ಮರುಮಂಜೂರಾತಿ ನೀಡಿರುವ ಆರೋಪಗಳೂ ಕೇಳಿಬರುತ್ತಿವೆ. ಇದರಿಂದ ನಿಜವಾದ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ. ಅಧಿಕಾರಿಗಳು ಅರ್ಜಿಗಳನ್ನು ಸಮಗ್ರವಾಗಿ ಪರಿಶೀಲಿಸಿ ಅರ್ಹರಿಗೆ ತಕ್ಷಣ ಮಾಶಾಸನ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಆಗಸ್ಟ್ 11ರಂದು ತಿಮ್ಮಾಪುರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಚಂದ್ರಕಾಂತ ಪಾಸ್ಟರ್, ಸಿಸ್ಟರ್ ಮರಿಯನ್, ಮೋಹನ ಐನಾಪೂರ್, ನಾಗಪ್ಪ ನಿಂಗಪ್ಪ, ಮಹೇಶ್ ರಾಣಪೂರ, ಶರಣಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.