×
Ad

ಕಲಬುರಗಿ | ಜಿಲ್ಲೆಯ ಐದು ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ 2,950 ರೂ. ನೀಡಲು ಒಪ್ಪಿಗೆ : ಸಚಿವ ಪ್ರಿಯಾಂಕ್ ಖರ್ಗೆ

Update: 2025-11-17 11:30 IST

ಕಲಬುರಗಿ: ಜಿಲ್ಲೆಯ ಎಲ್ಲಾ ಐದು ಹಾಗೂ ಯಾದಗಿರಿ ಜಿಲ್ಲೆಯ ಒಂದು ಸಕ್ಕರೆ ಕಾರ್ಖಾನೆಗಳು ಟನ್ ಕಬ್ಬಿಗೆ ರೂ 2,950/- ಗಳಂತೆ ಕಬ್ಬು ಪೂರೈಸಿದ 14 ದಿನಗಳೊಳಗಾಗಿ ಪೂರ್ತಿ ಹಣ ಸಂದಾಯಕ್ಕೆ ಒಪ್ಪಿಗೆ ನೀಡಿವೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ರವಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ನಿರಂತರವಾಗಿ‌ ಸಕ್ಕರೆ ಕಾರ್ಖಾನೆ ಮಾಲಕರು ಹಾಗೂ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದ ನಂತರ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಬ್ಬಿನ ದರ ನಿಗದಿಪಡಿಸಲಾಗಿದೆ. ಜಿಲ್ಲೆಯ ಸಕ್ಕರೆ ಕಾರ್ಖಾನೆಯವರೊಂದಿಗೆ ಕೂಡಾ ಈ ವಿಚಾರದಲ್ಲಿ ಚರ್ಚೆ ನಡೆಸಲಾಗಿದೆ. ಈಗಾಗಲೇ ಹಲವಾರು ರೈತರು ಒಪ್ಪಿಗೆ ನೀಡಿದ್ದಾರೆ ಎಂದರು.

ಬೆಳೆ ಹಾನಿ ; ಮೂರ್ನಾಲ್ಕು ದಿನಗಳಲ್ಲಿ ಖಾತೆಗೆ ಜಮೆ:

ಆಗಸ್ಟ್ ತಿಂಗಳಿನಲ್ಲಿ ಶೇ.69 ಹೆಚ್ಚುವರಿ ಹಾಗೂ ಸೆಪ್ಟೆಂಬರ್ ಶೇ.63 ಹೆಚ್ಚುವರಿಯಾಗಿ ಸತತ ಸುರಿದ ಮಳೆಯಿಂದಾಗಿ ಎನ್ ಡಿ ಆರ್ ಎಫ್ ಮಾರ್ಗಸೂಚಿಯನ್ವಯ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಯ ಜಂಟಿ ಸಮೀಕ್ಷೆಯ ವರದಿಯ ಅನುಸಾರ 3,24,205 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ವರದಿಯಾಗಿರುತ್ತದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿರುತ್ತದೆ.

ಬೆಳೆ ಹಾನಿಯಾದ ರೈತರ ವಿವರವನ್ನು ಈಗಾಗಲೇ PARIHARA (ಪರಿಹಾರ) ತಂತ್ರಾಂಶದಲ್ಲಿ ದಾಖಲಿಸಿದ್ದು, ಒಟ್ಟು 3,26,183 ರೈತರಿಗೆ 250.97 ರೂ. ಕೋಟಿ ಬೆಳೆ ಹಾನಿ ಪರಿಹಾರ ಮುಂದಿನ 3-4 ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ ಎಂದು ಸಚಿವ ಖರ್ಗೆ ತಿಳಿಸಿದರು.

ವಿಮೆ ಯೋಜನೆಯಡಿ ಮಧ್ಯಂತರ ಪರಿಹಾರಕ್ಕಾಗಿ 243.41 ಕೋಟಿ ಬಿಡುಗಡೆ :

ಬೆಳೆ ಹಾನಿಯಾದ ಹತ್ತಿ, ತೊಗರಿ, ಸೂರ್ಯಕಾಂತಿ ಹಾಗೂ ಅರಿಶಿಣ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಿದ ಒಟ್ಟು 2,67,560 ರೈತರ 3,35,046.2 ಹೇ ಪ್ರದೇಶಕ್ಕೆ ಬೆಳೆ ವಿಮೆ ಮಧ್ಯಂತರ ಪರಿಹಾರ (Mid-Season Adversity) ನೀಡಲು ಸರ್ಕಾರ ಆದೇಶಿಸಿದೆ. ಬೆಳೆವಿಮೆ ಪರಿಹಾರ ಕೆಲವೇ ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ.

►ಹತ್ತಿ : ಬೆಳೆ ವಿಮೆ ನೋಂದಣಿ ಮಾಡಿಸಿದ ರೈತರ- ಸಂಖ್ಯೆ10,025. ಪ್ರದೇಶ-11,727.5 ಹೆಕ್ಟೇರ್. ಅಂದಾಜು ಬೆಳೆ ವಿಮೆ ಮಧ್ಯಂತರ ಪರಿಹಾರ- ರೂ 9.95 ಕೋಟಿ.

►ತೊಗರಿ: ಬೆಳೆ ವಿಮೆ ನೋಂದಣಿ ಮಾಡಿಸಿದ ರೈತರ- ಸಂಖ್ಯೆ 2,56,845. ಪ್ರದೇಶ- 3,22,734 ಹೆಕ್ಟೇರ್. ಅಂದಾಜು ಬೆಳೆ ವಿಮೆ ಮಧ್ಯಂತರ ಪರಿಹಾರ- ರೂ 232.81ಕೋಟಿ.

►ಸೂರ್ಯಕಾಂತಿ: ಬೆಳೆ ವಿಮೆ ನೋಂದಣಿ ಮಾಡಿಸಿದ ರೈತರ ಸಂಖ್ಯೆ- 382. ಪ್ರದೇಶ- 392.088 ಹೆಕ್ಟೇರ್. ಅಂದಾಜು ಬೆಳೆ ವಿಮೆ ಮಧ್ಯಂತರ ಪರಿಹಾರ ರೂ 0.24 ಕೋಟಿ.

►ಅರಿಶಿಣ: ಬೆಳೆ ವಿಮೆ ನೋಂದಣಿ ಮಾಡಿಸಿದ ರೈತರ ಸಂಖ್ಯೆ- 308. ಪ್ರದೇಶ- 192.615 ಹೆಕ್ಟೇರ್. ಅಂದಾಜು ಬೆಳೆ ವಿಮೆ ಮಧ್ಯಂತರ ಪರಿಹಾರ ರೂ 0.41ಕೋಟಿ.

ಒಟ್ಟು ಬೆಳೆ ವಿಮೆ ನೋಂದಣಿ ಮಾಡಿಸಿದ ರೈತರ ಸಂಖ್ಯೆ -2,67,560. ಪ್ರದೇಶ- 3,35,046.2 ಹೆಕ್ಟೇರ್ ಹಾಗೂ ಒಟ್ಟು ಪರಿಹಾರ ರೂ 243.41ಕೋಟಿ.

ಉದ್ದು, ಹೆಸರು, ಸೋಯಾ ಅವರೆ ಹಾಗೂ ಇನ್ನಿತರ ಬೆಳಗಳಿಗೆ ಬೆಳೆ ಹಾನಿ ಕುರಿತು ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪದಡಿ (Localized calamity) ದೂರು ನೀಡಿದ ಒಟ್ಟು 22,385 ರೈತರಿಗೆ ರೂ. 8.79 ಕೊಟಿ ಬೆಳೆವಿಮೆ ಪರಿಹಾರ ಕೆಲವೇ ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ ಎಂದು ಸಚಿವರು ವಿವರಿಸಿದರು.

FRP ಮತ್ತು MSP ನಿಗದಿ ಕೇಂದ್ರದ ಜವಾಬ್ದಾರಿ :

ಎಫ್ ಆರ್ ಪಿ ಹಾಗೂ ಎಂ ಎಸ್ ಪಿ (FRP MSP) ನಿಗದಿ ಮಾಡುವುದು ಕೇಂದ್ರ ಸರ್ಕಾರದ ಜಬಾಬ್ದಾರಿಯಾಗಿದೆ‌. ಸೌಥ್ ಇಂಡಿಯನ್ ಶುಗರ್ ಮಿಲ್ಸ್ ಅಸೋಸಿಯೇಷನ್ (SISA) ಅವರು ಕೇಂದ್ರಕ್ಕೆ ಪತ್ರ ಬರೆದು FRP, MSP ವಿಚಾರದಲ್ಲಿ ಪತ್ರ ಬರೆದಿದ್ದಾರೆ‌. ಈ ಸಂಘದಲ್ಲಿ ಬಿಜೆಪಿಯವರೇ ಇದ್ದಾರೆ. ಕಬ್ಬಿನ ಬೆಲೆ ನೀಡುವಂತೆ ರೈತರು ಒತ್ತಾಯಿಸಿದಾಗ, ಸ್ವತಃ ಮುರುಗೇಶ್ ನಿರಾಣಿ ಅವರು ತಮಗೆ ಸಕ್ಕರೆ ಕಾರ್ಖಾನೆ ನಡೆಸಲು ಆಗದು, ಸರ್ಕಾರಕ್ಕೆ ಬರೆದು ಕೊಡುತ್ತೇವೆ ಎಂದು ಹೇಳುತ್ತಾರೆ. ಬಿಜೆಪಿಯವರು ಹೇಳಿದರೆ ಅದು ಸರಿ, ಅದೇ ನಾವು ಬೇಡಿಕೆ ಇಟ್ಟರೆ ತಪ್ಪು ಎಂದು ಬಿಂಬಿಸಲಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರೇಷ್ಮೆ ಉದ್ಯಮಿಗಳ ನಿಗಮದ ನಿಯಮಿತದ ಅಧ್ಯಕ್ಷೆ, ಶಾಸಕಿ ಕನೀಜ್ ಫಾತೀಮ್, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಕರ್ನಾಟಕ ರಸ್ತೆ ಸಾರಿಗೆ ನಿಯಮದ ಅಧ್ಯಕ್ಷ ಅರುಣ್ ಕುಮಾರ್ ಎಂ.ವೈ.ಪಾಟೀಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಸಿ.ಇ.ಓ.ಭಂವರ್ ಸಿಂಗ್ ಮೀನಾ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News