ಕಲಬುರಗಿ | ವಿವಿಧ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ, ಸುಲಿಗೆ ಪ್ರಕರಣ; 7 ಮಂದಿ ಆರೋಪಿಗಳ ಬಂಧನ: ಎಸ್ಪಿ ಅಡ್ಡೂರು ಶ್ರೀನಿವಾಸುಲು
ಕಲಬುರಗಿ: ವಾಡಿ, ಚಿತ್ತಾಪುರ ಹಾಗೂ ಕಮಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ವಿವಿಧ ಕಳ್ಳತನ ಹಾಗೂ ಸುಲಿಗೆ ಪ್ರಕರಣಗಳಿಗೆ ಸಂಬಂಧಿಸಿದಂತೆ 5 ಪ್ರಕರಣಗಳನ್ನು ಭೇದಿಸಿದ ಜಿಲ್ಲಾ ಪೊಲೀಸರು 7 ಆರೋಪಿಗಳನ್ನು ಬಂಧಿಸಿ, ಅವರಿಂದ ಚಿನ್ನಾಭರಣ, ನಗದು ಹಾಗೂ ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ತಿಳಿಸಿದ್ದಾರೆ.
ನಗರದ ಜಿಲ್ಲಾ ಪೊಲೀಸ್ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೋಂಡಾ ಶೈನ್ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಕನಕಟ್ಟಾ ಗ್ರಾಮದ ನಿವಾಸಿ ಆನಂದ ಭಜಂತ್ರಿ ಎಂಬಾತನನ್ನು ಬಂಧಿಸಲಾಗಿದ್ದು, ಆತನಿಂದ 5 ಮೋಟಾರ್‌ಸೈಕಲ್‌ಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು. ಈ ಪ್ರಕರಣದ ತನಿಖೆಯನ್ನು ಗ್ರಾಮೀಣ ಡಿವೈಎಸ್ಪಿ ಲೋಕೇಶ್ವರಪ್ಪ, ಸಿಪಿಐ ಶಿವಶಂಕರ್ ಸಾಹು, ಪಿಎಸ್ಐ ಚೇತನ ನೇತೃತ್ವದ ತಂಡ ನಡೆಸಿತು.
ಇದೇ ಠಾಣಾ ವ್ಯಾಪ್ತಿಯ ಕಲ್ಮೂಡ ಗ್ರಾಮದ ದತ್ತ ದಿಗಂಬರ ದೇವಸ್ಥಾನದ ಹುಂಡಿ ಒಡೆದು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಣಿಕ್ ತಳವಾರ, ಗುರುರಾಜ್ ಕೊಡಂಬಲ ಹಾಗೂ ಶ್ರೀಕಾಂತ್ ತಳವಾರ ಎಂಬವರನ್ನು ಬಂಧಿಸಿ, 5,350 ರೂ.ನಗದು ಹಣ ಜಪ್ತಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವಿವರಿಸಿದರು.
ಚಿತ್ತಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶ್ರೀ ಶರಣಬಸವೇಶ್ವರ ದೇವಸ್ಥಾನ ಹುಂಡಿ ಹಾಗೂ ಕೊತ್ತಲಾಪುರ ಯಲ್ಲಮ್ಮ ದೇವಸ್ಥಾನದ ಬೆಳ್ಳಿ ಸಾಮಾನು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಳಗಿ ತಾಲೂಕಿನ ಇಂಗನಕಲ್ ಗ್ರಾಮದ ರಾಜು ಸಂಗಣ್ಣ ತಳವಾರ (20) ಮತ್ತು ಸಾಬಣ್ಣ ಕದ್ದರಗಿ (26) ಅವರನ್ನು ಬಂಧಿಸಲಾಗಿದೆ. ಕಳ್ಳತನದ ಸಾಮಾನು ಮಾರಾಟದಿಂದ ಬಂದ 4,300 ರೂ. ನಗದು ಹಣವನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರಾಯಿ ಅಂಗಡಿಯಲ್ಲಿ ಸುಲಿಗೆ ನಡೆದಿದೆ ಎಂದು ಸುಳ್ಳು ಪ್ರಕರಣ ಸೃಷ್ಟಿಸಿದ್ದ ಅಂಗಡಿ ಕೆಲಸಗಾರ ಬಾಪುಗೌಡ ನಾಗರೆಡ್ಡಿ ನಾಚವಾರ (29) ಎಂಬಾತನನ್ನು ಬಂಧಿಸಲಾಗಿದೆ. ಆತನಿಂದ ₹5,54,605 ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮೀಣ ಉಪವಿಭಾಗದ ಡಿವೈಎಸ್ಪಿ ಲೋಕೇಶ್ವರಪ್ಪ, ಶಹಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐ ಶಿವಶಂಕರ್ ಸಾಹು, ಪಿ.ಎಸ್. ವನಂಜಕರ, ಪಿಎಸ್ಐ ತಿರುಮಲೇಶ್ ಸೇರಿದಂತೆ ವಿವಿಧ ಠಾಣೆಗಳ ಪಿಎಸ್ಐಗಳು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.