×
Ad

ಕಲಬುರಗಿಯಲ್ಲಿ 24x7 ನೀರು ಸರಬರಾಜು ಯೋಜನೆ : ವಾರ್ಡ್ ನಂ.9ರಲ್ಲಿ ಮ್ಯಾಪಿಂಗ್ ಸಮೀಕ್ಷೆಗೆ ಚಾಲನೆ

Update: 2026-01-28 18:27 IST

ಕಲಬುರಗಿ: ವಿಶ್ವಬ್ಯಾಂಕ್ ನೆರವಿನ ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆ (ಕುಸ್ಸೆಂಫ್) ಅಡಿಯಲ್ಲಿ ಕಲಬುರಗಿ ನಗರದಲ್ಲಿ 24x7 ನಿರಂತರ ನೀರು ಸರಬರಾಜು ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ಈ ಯೋಜನೆಯ ಭಾಗವಾಗಿ ಪಾಲಿಕೆಯ ವಾರ್ಡ್ ನಂ.9, 25, 26, 27, 35, 39 ಹಾಗೂ 41 ಒಳಗೊಂಡ ಜೋನ್ ನಂ.30ರಲ್ಲಿ ಮ್ಯಾಪಿಂಗ್ ಸಮೀಕ್ಷೆ ಆರಂಭವಾಗಿದೆ.

ಬುಧವಾರ ನಗರದ ಸಂಗಮೇಶ್ವರ ಕಾಲೋನಿಯಲ್ಲಿ ವಾರ್ಡ್ ನಂ.9ರ ಚುನಾಯಿತ ಸದಸ್ಯರಾದ ಸುನೀಲ ಬನಶೆಟ್ಟಿ ಅವರು ಮ್ಯಾಪಿಂಗ್ ಸಮೀಕ್ಷೆಗೆ ಅಧಿಕೃತ ಚಾಲನೆ ನೀಡಿದರು.

ಈ ಯೋಜನೆಯಡಿ ನಗರದಲ್ಲಿನ ಪ್ರತಿಯೊಂದು ಮನೆಗೂ ನಳ ಸಂಪರ್ಕ ಒದಗಿಸುವ ಗುರಿ ಹೊಂದಲಾಗಿದ್ದು, ಅದಕ್ಕೂ ಮುನ್ನ ಗ್ರಾಹಕರ ಹಾಗೂ ನೀರು ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ನಗರದಲ್ಲಿನ 55 ವಾರ್ಡ್‌ಗಳನ್ನು 47 ಜೋನ್‌ಗಳು ಹಾಗೂ 64 ಡಿಎಮ್‌ಎಗಳಾಗಿ ವಿಂಗಡಿಸಿ, ಪ್ರತ್ಯೇಕವಾಗಿ ಮ್ಯಾಪಿಂಗ್ ಸಮೀಕ್ಷೆ ನಡೆಸಲಾಗುತ್ತಿದೆ.

ಜೋನ್ ನಂ.30ರಲ್ಲಿ ದೇವಿನಗರ, ಸಂತೋಷ ಕಾಲೋನಿ, ಜೆ.ಆರ್. ನಗರ, ವಿವೇಕಾನಂದ ನಗರ, ಆಳಂದ ಕಾಲೋನಿ, ಕೈಲಾಸ ನಗರ ಸೇರಿದಂತೆ ಇತರ ಪ್ರದೇಶಗಳಲ್ಲಿ ಮ್ಯಾಪಿಂಗ್ ಸರ್ವೇ ಕೈಗೊಳ್ಳಲಾಗುತ್ತಿದ್ದು, ಸುಮಾರು 8,753 ಮನೆಗಳ ಸಮೀಕ್ಷೆ ನಡೆಸುವ ನಿರೀಕ್ಷೆಯಿದೆ ಎಂದು ಎಲ್ ಅಂಡ್ ಟಿ ಕಂಪನಿಯ ಸಾಮಾಜಿಕ ತಜ್ಞರಾದ ಲಿಂಗರಾಜ್ ಹೀರಾ ತಿಳಿಸಿದ್ದಾರೆ.

ಮ್ಯಾಪಿಂಗ್ ಸಮೀಕ್ಷೆಯ ವೇಳೆ ಎಲ್ಲಾ ಗ್ರಾಹಕರ ಹಾಗೂ ಆಸ್ತಿಗಳ ವಿವರಗಳನ್ನು ಟ್ಯಾಬ್‌ಗಳ ಮೂಲಕ ಡಿಜಿಟಲ್ ರೀತಿಯಲ್ಲಿ ಸಂಗ್ರಹಿಸಲಾಗುತ್ತಿದೆ. ಇದರಲ್ಲಿ ಅಧಿಕೃತ ನಳ ಸಂಪರ್ಕ, ಅನಧಿಕೃತ ಸಂಪರ್ಕ, ಹೊಸ ಸಂಪರ್ಕ, ಗೃಹ ಬಳಕೆ, ಗೃಹೇತರ ಹಾಗೂ ವಾಣಿಜ್ಯ ಬಳಕೆಯ ನೀರು ಸಂಪರ್ಕಗಳ ಸಂಪೂರ್ಣ ಮಾಹಿತಿ ಸಂಗ್ರಹಿಸಿ, ನಳ ಸಂಪರ್ಕದ ದಾಖಲೆಗಳನ್ನು ಸಿದ್ಧಪಡಿಸಲಾಗುತ್ತದೆ ಎಂದು ಕಲಬುರಗಿ ಯೋಜನಾ ಅನುಷ್ಠಾನ ಘಟಕದ ಸಾರ್ವಜನಿಕ ಸಂಪರ್ಕ ಅಧಿಕಾರಿ ಶರಣು ಸಾಲಿಮನಿ ಮಾಹಿತಿ ನೀಡಿದರು.

ಈ ಸಮೀಕ್ಷಾ ಕಾರ್ಯಕ್ರಮದಲ್ಲಿ ಯೋಜನಾ ಅನುಷ್ಠಾನ ಘಟಕದ ಸಾಮಾಜಿಕ ಅಭಿವೃದ್ಧಿ ಅಧಿಕಾರಿ ನಾಗಯ್ಯ ಹಿರೇಮಠ, ಸ್ಮೆಕ್ ಕನ್ಸಲ್ಟೆನ್ಸಿಯ ಸಾಮಾಜಿಕ ತಜ್ಞ ಯುವರಾಜ್ ಕಟ್ಟಿಮನಿ, ಎಲ್ ಅಂಡ್ ಟಿ ಕಂಪನಿಯ ಸಾಮಾಜಿಕ ತಜ್ಞರಾದ ಲಿಂಗರಾಜ ಆಳಂದ, ರೀತೇಶ್ ಗೌಳಿ, ಚಂದ್ರಶೇಖರ, ನೆರವು ಸಂಸ್ಥೆಯ ತಂಡದ ನಾಯಕ ಕೊಟ್ರಯ್ಯ ಸೇರಿದಂತೆ ಸರ್ಕಾರೇತರ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News