ಕಲಬುರಗಿ | ನ.12ರಂದು ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಟಕಿಯಿಂದ ಆಳಂದವರೆಗೆ ಪಾದಯಾತ್ರೆ
ಕಲಬುರಗಿ: ಆಳಂದ ತಾಲೂಕಿನ ರೈತರು ಮತ್ತು ಕೃಷಿ ಕೂಲಿ ಕಾರ್ಮಿಕರು ಎದುರಿಸುತ್ತಿರುವ ಆರ್ಥಿಕ ಹಾನಿ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆಯನ್ನು ವಿರೋಧಿಸಿ, ಅಖಿಲ ಭಾರತ ಕಿಸಾನ್ ಸಭಾ (AIKS) ವತಿಯಿಂದ ನವೆಂಬರ್ 12ರಂದು ಮಟಕಿ ಗ್ರಾಮದಿಂದ ಆಳಂದ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿವರೆಗೆ ಪಾದಯಾತ್ರೆ ನಡೆಸಲಾಗುತ್ತಿದೆ. ಪಾದಯಾತ್ರೆಯ ಬಳಿಕ ಧರಣಿ ಮತ್ತು ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ ಎಂದು ಕಿಸಾನ್ ಸಭಾದ ರಾಜ್ಯ ಕಾರ್ಯದರ್ಶಿ ಮೌಲಾ ಮುಲ್ಲಾ ಹೇಳಿದ್ದಾರೆ.
ಕಿಸಾನ್ ಸಭಾ ಕಚೇರಿಯಲ್ಲಿ ನಡೆದ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಮೌಲಾ ಮುಲ್ಲಾ, ನವೆಂಬರ್ 12ರಂದು ಬೆಳಿಗ್ಗೆ 10.30ಕ್ಕೆ ಮಟಕಿ ಗ್ರಾಮದಿಂದ ಪಾದಯಾತ್ರೆ ಆರಂಭವಾಗಿ ಆಳಂದ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಮುಂದೆ ಮುಕ್ತಾಯವಾಗುತ್ತದೆ. ಯಾತ್ರೆಯನ್ನು ಯಶಸ್ವಿಗೊಳಿಸಲು ಕಾರ್ಯಕರ್ತರು ಮತ್ತು ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕೋರಿದರು.
ಈ ಆಂದೋಲನದ ಮೂಲಕ ದನ ನಿರ್ವಹಣೆ ಯೋಜನೆ, ಹೈನುಗಾರಿಕೆ ಉತ್ತೇಜನ, ಸಾಲ ಮನ್ನಾ, ಬೆಳೆ ಹಾನಿ ಪರಿಹಾರ ಮತ್ತು ರೈತರ ಪ್ರಮುಖ ಬೇಡಿಕೆಗಳಿಗೆ ಶೀಘ್ರ ಪರಿಹಾರಕ್ಕೆ ಒತ್ತಾಯಿಸಲಾಗುತ್ತದೆ ಎಂದು ಹೇಳಿದರು.
ಕಳೆದ 15 ವರ್ಷಗಳಿಂದ ಉದ್ಯೋಗ ಖಾತ್ರಿ ಯೋಜನೆ ಹಾಗೂ ದನದ ಕೊಟ್ಟಿಗೆ ಯೋಜನೆಗಳು ಸರಿಯಾಗಿ ಜಾರಿಯಾಗದಿರುವುದರಿಂದ ರೈತರಿಗೆ ದೊಡ್ಡ ನಷ್ಟ ಉಂಟಾಗಿದೆ. ಆಳಂದ ತಾಲೂಕಿನಲ್ಲೇ ಪ್ರತಿ ವರ್ಷ ಸುಮಾರು 30 ಸಾವಿರಕ್ಕೂ ಹೆಚ್ಚು ಕುರಿಮರಿಗಳು ಔಷಧಿ ಮತ್ತು ಆಶ್ರಯದ ಕೊರತೆಯಿಂದ ಮಳೆಗೆ ಸಾವಿಗೀಡಾಗುತ್ತಿವೆ. ಇದರಿಂದ ಹಾಲು ಉತ್ಪಾದನೆ ಕಡಿಮೆಯಾಗುತ್ತಿದ್ದು, ಕುರಿ ಸಾಕಾಣಿಕರಿಗೆ ಸುಮಾರು 30 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂದು AIKS ನಾಯಕರು ಆರೋಪಿಸಿದರು.
ಪ್ರತಿ ಹೋಬಳಿಗೆ ವೈದ್ಯ ಮತ್ತು ಔಷಧಿ ಸಮೇತ ಪಶುವೈದ್ಯ ಸೇವೆ ಕಡ್ಡಾಯವಾಗಬೇಕು. ಇಲ್ಲದಿದ್ದರೆ ಈ ಯೋಜನೆಗಳು ಹೆಸರಿಗೆ ಮಾತ್ರ ಉಳಿಯುತ್ತವೆ ಎಂದು ತಾಲೂಕು ಕಾರ್ಯದರ್ಶಿ ಅರಿಫಾಲಿ ಲಂಗಡೆ ಹೇಳಿದರು.
ಇದರ ಜೊತೆಗೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ (MGNREGA) ಸಹ ಸರಿಯಾಗಿ ಜಾರಿಯಾಗದಿರುವುದರಿಂದ ಗ್ರಾಮೀಣ ಯುವಕರ ಸ್ವಯಂ ಉದ್ಯೋಗ ಅವಕಾಶಗಳು ಹಾನಿಗೊಳಗಾಗುತ್ತಿವೆ. ಯೋಜನೆಗಳು ಸರಿಯಾಗಿ ಜಾರಿಯಾಗದಿರುವುದರಿಂದ ರೈತರು ದೊಡ್ಡ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ಕಿಸಾನ್ ಸಭಾ ತಾಲೂಕು ಅಧ್ಯಕ್ಷ ಚಂದ್ರಕಾಂತ ಖೋಬ್ರೆ ಹೇಳಿದರು.
ಕೃಷಿ ಉತ್ಪನ್ನಗಳ ಬೆಲೆ ಕಳೆದ ಹಲವು ವರ್ಷಗಳಿಂದ ಯಥಾಸ್ಥಿತಿಯಲ್ಲಿರುವಾಗ ಗೊಬ್ಬರ, ಯಂತ್ರೋಪಕರಣಗಳು ಮತ್ತು ಇತರ ಇನ್ಪುಟ್‌ಗಳ ಬೆಲೆ ದಿನೇದಿನೇ ಏರಿಕೆಯಾಗುತ್ತಿದೆ. ಈ ವರ್ಷ ನಿರಂತರ ಮಳೆಯಿಂದ ಬೆಳೆಗಳು ಹಾಳಾಗಿ, ಸಾಲದ ಚಕ್ರದಲ್ಲಿ ರೈತರು ಸಿಲುಕಿದ್ದಾರೆ. ಆದ್ದರಿಂದ ಬೆಳೆ ಹಾನಿ ಪರಿಹಾರವನ್ನು ತಕ್ಷಣ ನೀಡಬೇಕೆಂದು ನ್ಯಾಯವಾದಿ ಪಂಡಿತ ಸಲಗರ ಹೇಳಿದರು.
"ನಮ್ಮ ಹೊಲ – ನಮ್ಮ ರಸ್ತೆ" ಯೋಜನೆ ಸಹ ಹೆಸರಿಗೆ ಮಾತ್ರ ಸೀಮಿತವಾಗಿದ್ದು, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯರೂಪದಲ್ಲಿ ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು.
ಈ ಆಂದೋಲನದಲ್ಲಿ ರೈತರು, ಕಾರ್ಮಿಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮುಖಂಡರು ವಿನಂತಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅರಿಫಾಲಿ ಲಂಗಡೆ, ಮಹಾದೇವ ಮಟಕಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮೈಲಾರಿ ಜೋಗಿ, ಮನಗಿಣಿ ಪೆಜಾರಿ ಮತ್ತು ಇತರರು ಉಪಸ್ಥಿತರಿದ್ದರು.