Kalaburagi | ಕಾಳ ಸಂತೆಯಲ್ಲಿ ಸಿಲಿಂಡರ್ ಮಾರಾಟವಾದರೆ ಡಿಸ್ಟ್ರಿಬೂಟರ್ ಮೇಲೆ ಕ್ರಮ : ಡಿಸಿ ಇಕ್ರಮ್ ಶರೀಫ್
ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆ
ಕಲಬುರಗಿ: ಮದ್ಯ ಪ್ರಾಚ್ಯ ದೇಶದಲ್ಲಿನ ಬಿಕ್ಕಟ್ಟಿನ ನಡುವೆ ಜಿಲ್ಲೆಯಲ್ಲಿ ಎಲ್ಲಿಯೆ ಕಾಳ ಸಂತೆಯಲ್ಲಿ ಸಿಲಿಂಡರ್ ಮಾರಾಟವಾದರೆ ಗ್ಯಾಸ್ ಏಜೆನ್ಸಿ ಡಿಸ್ಟ್ರಿಬೂಟರ್ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಗ್ಯಾಸ್ ಏಜೆನ್ಸಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ವಾಣಿಜ್ಯ / ಗೃಹ ಬಳಕೆ ಎಲ್.ಪಿ.ಜಿ. ಸಿಲಿಂಡರ್ ಪೂರೈಲೆಯಲ್ಲಿ ನಿಯಂತ್ರಣ ಮತ್ತು ಮೇಲ್ವಿಚಾರಣೆಗಾಗಿ ಜಿಲ್ಲಾ ಮಟ್ಟದಲ್ಲಿ ರಚಿಸಿರುವ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗೃಹ ಬಳಕೆದಾರರಿಗೆ ಫಿಪೋ ಆಧಾರದ ಮೇಲೆ (ಮೊದಲು ನೊಂದಾಸಿದವರಿಗೆ ಮೊದಲು ವಿತರಣೆ) ಸಿಲಿಂಡರ್ ಪೂರೈಸಬೇಕು ಎಂದರು.
ಇನ್ನು ಅನಧಿಕೃತ ದಾಸ್ತಾನು, ರಿಫಿಲ್ಲಿಂಗ್ ಮಾಡುವುದು ಕಂಡುಬಂದಲ್ಲಿ ಅಂತಹವರ ಮೇಲೆ ಅಗತ್ಯ ವಸ್ತುಗಳ ಕಾಯ್ದೆಯಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಇನ್ನು ಗೃಹ ಬಳಕೆ ಸಿಲಿಂಡರ್ ಗಳು ಯಾವುದೇ ಕಾರಣಕ್ಕೂ ವಾಣಿಜ್ಯ ಉದ್ದೇಶಕ್ಕೆ ಹೋಟೆಲ್‌ಗಳು ಬಳಸುವಂತಿಲ್ಲ. ಅಹಾರ ಇಲಾಖೆ ಅಧಿಕಾರಿಗಳು ಇದನ್ನು ತಪಾಸಣೆ ಮಾಡಬೇಕು ಎಂದರು.
ಸಿಲಿಂಡರ್ ಬುಕ್ಕಿಂಗ್ ಮಾಡಲು ನಗರ ಪ್ರದೇಶದ ಗ್ರಾಹಕರು 25 ದಿನ ಮತ್ತು ಗ್ರಾಮೀಣ ಭಾಗದ ಗ್ರಾಹಕರು 45 ದಿನಗಳ ಅಂತವಿರಬೇಕು. ಆದರೆ ಹೆಚ್.ಪಿ.ಸಿ.ಎಲ್ ಕಂಪನಿಯವರು ನಗರದ ಗ್ರಾಹಕರಿಗೆ 45 ದಿನಗಳ ಕಾಲಮಿತಿ ಹೇರಿರುವುದರಿಂದ ಗ್ರಾಹಕರಿಗೆ ತೊಂದರೆಯಾಗುತ್ತಿದೆ ಎಂದು ಅಹಾರ ಇಲಾಖೆ ಪ್ರಭಾರಿ ಉಪನಿರ್ದೇಶಕ ಮುನಾವರ ದೌಲಾ ಡಿ.ಸಿ. ಗಮನಕ್ಕೆ ತಂದರು. ಡಿ.ಸಿ. ಇಕ್ರಮ್ ಶರೀಫ್ ಮಾತನಾಡಿ, ಐ.ಓ.ಸಿ.ಎಲ್, ಬಿ.ಪಿ.ಸಿ.ಎಲ್ ಅವರು 25 ದಿನಕ್ಕೆ ಸಿಲಿಂಡರ್ ನೀಡುವಾಗ ನಿಮಗೇನು ತೊಂದರೆ ಎಂದು ಅಸಮಾಧಾನ ವ್ಯಕ್ತಪಡಿಸಿದಲ್ಲದೆ ನಿಮ್ಮ ಹಂತದಲ್ಲಿ ಈ ರೀತಿಯಾಗಿ ನಿರ್ಧಾರ ತೆಗೆದುಕೊಳ್ಳುವಂತಿಲ್ಲ. ಕೂಡಲೆ 25 ದಿನಕ್ಕೆ ಇಳಿಸುವಂತೆ ಕಂಪನಿ ಪ್ರತಿನಿಧಿ ಪೃಥ್ವಿ ಅವರಿಗೆ ಸೂಚನೆ ನೀಡಿದರು.
ಜಿಲ್ಲೆಯ ಯಾವುದೇ ಆರೋಗ್ಯ ಸಂಸ್ಥೆಗಳಿಗೆ, ಶಾಲೆ, ವಸತಿ ನಿಲಯ, ಕ್ಯಾಂಟೀನ್ ಗಳಿಗೆ ಸಿಲಿಂಡಿರ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಬೇಕು. ಅಗತ್ಯ ಪ್ರಮಾಣದಲ್ಲಿ ದಾಸ್ತಾನಿದ್ದರೂ ಜನ ಆತಂಕಗೊಂಡಿದ್ದು, ಇಂತಹ ಒಂದು ಬಿಕ್ಕಟ್ಟು ಪರಿಸ್ಥಿತಿಯಲ್ಲಿ ಗ್ಯಾಸ್ ಎಜೆನ್ಸಿಗಳು ಜಿಲ್ಲಾಡಳಿತ ನೀಡುವ ನಿರ್ದೇಶನವನ್ನು ಪಾಲಿಸುವ ಮೂಲಕ ಅಗತ್ಯ ಸಹಕಾರ ನೀಡಬೇಕು. ಇನ್ನು ಏಜೆನ್ಸಿಗಳು ಸಹ ಸಾರ್ವಜನಿಕರಿಗೆ ಸಿಲಿಂಡರ್ ಸಮಸ್ಯೆ ಇಲ್ಲ ಎಂಬುದನ್ನು ಖಾತ್ರಿಪಡಿಸಬೇಕು ಎಂದರಲ್ಲದೆ ಕೂಡಲೆ ಸಹಾಯವಾಣಿ ಸಕ್ರಿಯಗೊಳಿಸಿ ಗ್ರಾಹಕರ ಸಮಸ್ಯೆಗಳಿಗೆ ಕಿವಿಯಾಗಬೇಕು ಎಂದು ಆಹಾರ ಇಲಾಖೆಗೆ ಡಿ.ಸಿಮ ಸೂಚಿಸಿದರು.
ಜಿಲ್ಲೆಯಲ್ಲಿ ಪೆಟ್ರೋಲ್ ಪಂಪ್ ಗಳು ಸರ್ಕಾರದ ನಿರ್ದೇಶನದಂತೆ ವಾಹನದ ಟ್ಯಾಂಕರ್‌ಗಳಿಗೆ ನಿಗದಿತ ಪ್ರಮಾಣದಲ್ಲಿ ಪೆಟ್ರೋಲ್-ಡೀಸೆಲ್ ಪೂರೈಸಬೇಕು. ಬಲ್ಕ್ ಬಳಕೆದಾರರು ನೇರವಾಗಿ ಡಿಪೋನಿಂದಲೆ ಪಡೆಯಬೇಕು ಎಂದು ಡಿ.ಸಿ. ಇಕ್ರಮ್ ಶರೀಫ್ ತಿಳಿಸಿದರು.
ಆಹಾರ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಮುನಾವರ್ ದೌಲಾ ಮಾತನಾಡಿ, ಪ್ರಸ್ತುತ ಜಿಲ್ಲೆಯಲ್ಲಿ 47 ಗ್ಯಾಸ್ ಡೀಲರ್‌ಗಳಿದ್ದು, ಇದರಲ್ಲಿ 3,29,674 ಸಿಂಗಲ್ ಸಿಲಿಂಡರ್ ಮತ್ತು 2,32,294 ಡಬಲ್ ಸಿಲಿಂಡರ್ ಗ್ರಾಹಕರಿದ್ದಾರೆ. ಇದಲ್ಲದೆ 10,372 ವಾಣಿಜ್ಯ ಸಿಲಿಂಡರ್ ಗ್ರಾಹಕರಿದ್ದು, 2,68,399 ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿದ್ದಾರೆ. ಪಿ.ಎಂ.ಉಜ್ವಲ್ ಯೋಜನೆಯ ಗ್ರಾಹಕರಿಗೆ 45 ದಿನಕ್ಕೆ ಮತ್ತು ನಗರ ಗ್ರಾಹಕರಿಗೆ ಸಿಲಿಂಡರ್ ಬುಕ್ ಮಾಡಲು ಹಿಂದಿನ ಡೆಲವರಿಗೆ ಕನಿಷ್ಠ 25 ದಿನ ಅಂತರವಿರಬೇಕು ಎಂದು ಸಭೆಗೆ ಮಾಹಿತಿ ನೀಡಿದಲ್ಲದೆ, ಗುರುವಾರಕ್ಕೆ 19,158 ಗೃಹ ಬಳಕೆ ಸಿಲಿಂಡರ್ ಮತ್ತು 1,761 ವಾಣಿಜ್ಯ ಸಿಲಿಂಡರ್ ಜಿಲ್ಲೆಯಲ್ಲಿ ದಾಸ್ತಾನು ಇದ್ದು, ಯಾವುದೇ ಸಿಲಿಂಡರ್ ಸಮಸ್ಯೆ ಇಲ್ಲ ಎಂದು ವಿವರಿಸಿದರು.
ಸಿಲಿಂಡರ್ ಲಭ್ಯ, ಆತಂಕ ಬೇಡ :
ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲಿ ಸಿಲಿಂಡರ್ ಕೊರತೆ ಇಲ್ಲ. ಪ್ರತಿನಿತ್ಯ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಂಪನಿಗಳು ಸಿಲಿಂಡರ್ ಪೂರೈಸುತ್ತಿವೆ. ಸಾರ್ವಜನಿಕರು ಆತಂಕಗೊಳ್ಳಬಾರದು. ನಗರದ ನಿವಾಸಿಗಳು 25 ದಿನ ಮತ್ತು ಗ್ರಾಮೀಣ ಭಾಗದ ಜನರು 45 ದಿನ ಅವಧಿ ಮೀರಿದ ನಂತರವೇ ಸಿಲಿಂಡರ್ ಬುಕ್ ಮಾಡಬೇಕೆಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಎಲ್.ಪಿ.ಜಿ. ವಿತರಕರು ಮಾತನಾಡಿ, 2002-3ನೇ ಸಾಲಿನಿಂದ ಅಕ್ಷರ ದಾಸೋಹ ಯೋಜನೆಯಡಿ ಶಾಲೆಗಳಿಗೆ ಸಿಲಿಂಡರ್ ಪೂರೈಕೆ ಮಾಡುತ್ತಿದ್ದು, ಜಿಲ್ಲೆಯಲ್ಲಿ ಪ್ರತಿ ಕಿಮೀ ಗೆ ಕೇವಲ 1.60 ರೂ. ಸಾರಿಗೆ ವೆಚ್ಚವಾಗಿ ನೀಡಲಾಗುತ್ತಿದ್ದು, ಇದು ಇಂದಿನ ದುಬಾರಿ ದುನಿಯಾದಲ್ಲಿ ಇದು ನಮಗೆ ಅರ್ಥಿಕ ಹೊರೆಯಾಗಿ ಪರಿಣಮಿಸಿದೆ. ಡೀಸೆಲ್ ಅಂದು 30 ರೂ. ಲೀಟರ್ ಇತ್ತು, ಇಂದು 90 ರೂ.ಗೆ ಏರಿಕೆಯಾಗಿದೆ. ಹೀಗಾಗಿ ಸಾರಿಗೆ ವೆಚ್ಚ ಪ್ರತಿ ಕಿ.ಮೀ 3 ರೂ. ಗಳಿಗೆ ಹೆಚ್ಚಿಸಬೇಕೆಂದು ಡಿ.ಸಿ ಗೆ ಮನವಿ ಮಾಡಿದರು. ಈ ಕುರಿತು ಜಿಲ್ಲಾ ಪಂಚಾಯತ್ ಸಿ.ಇ.ಓ, ತಾಲೂಕು ಪಂಚಾಯತ್ ಇ.ಓ ಅವರೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದು ಡಿ.ಸಿ. ಭರವಸೆ ನೀಡಿದರು.
ಸಭೆಯಲ್ಲಿ ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ರಫೀಕ್ ಲಾಡಜಿ, ಆಹಾರ ಇಲಾಖೆಯ ಸಹಾಯಕ ನಿರ್ದೇಶಕ ಅಲ್ಲಾಭಕ್ಷ, ಪೆಟ್ರೋಲ್ ಪಂಪ್ ಸ್ಟೇಷನ್ ಸಂಘದ ಉಪಾಧ್ಯಕ್ಷ ರಾಮಚಂದ್ರ ಕೋಸಗಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಐ.ಓ.ಸಿ.ಎಲ್, ಹೆಚ್.ಪಿ.ಸಿ.ಎಲ್., ಬಿ.ಪಿ.ಸಿ.ಎಲ್, ನಯರಾ ಕಂಪನಿ ಅಧಿಕಾರಿಗಳು ಮತ್ತು ಡೀಲರ್‌ಗಳು ಭಾಗವಹಿಸಿದ್ದರು.