×
Ad

Kalaburagi | ಕಾಳಗಿ ತಾಪಂನಲ್ಲಿ 6.50 ಕೋಟಿ ರೂ. ಕಾಮಗಾರಿಗಳಲ್ಲಿ ಅಕ್ರಮ ಆರೋಪ : ತನಿಖೆಗೆ ಕೆಆರ್‌ಎಸ್ ಆಗ್ರಹ

Update: 2026-07-10 17:06 IST

ಕಲಬುರಗಿ, ಜು.10: ಕಾಳಗಿ ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ವಿವಿಧ ಇಲಾಖೆಗಳಡಿ ಕೈಗೊಳ್ಳಲಾದ ಸುಮಾರು 6.50 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಲ್ಲಿ ವ್ಯಾಪಕ ಅಕ್ರಮ ಹಾಗೂ ಬೋಗಸ್ ಕಾಮಗಾರಿಗಳು ನಡೆದಿವೆ ಎಂದು ಆರೋಪಿಸಿರುವ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷ, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ಈ ಸಂಬಂಧ ಕಾಳಗಿ ತಹಸೀಲ್ದಾರರ ಮೂಲಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದ ಕೆಆರ್‌ಎಸ್ ಮುಖಂಡರು, 2022-23ರಿಂದ 2025-26ರವರೆಗೆ ತಾಲೂಕು ಪಂಚಾಯತ್‌ನ ಅನಿರ್ಬಂಧಿತ ಕ್ರಿಯಾ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಡಿ ಶಾಲಾ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ, ರಸ್ತೆ ಅಭಿವೃದ್ಧಿ ಹಾಗೂ ಅಂಗವಿಕಲರ ಕಲ್ಯಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿದೆ. ಆದರೆ ಬಹುತೇಕ ಕಾಮಗಾರಿಗಳು ಕೇವಲ ದಾಖಲೆಗಳಲ್ಲಿ ಮಾತ್ರ ಪೂರ್ಣಗೊಂಡಿದ್ದು, ಸ್ಥಳದಲ್ಲಿ ಕಾಮಗಾರಿ ನಡೆದಿಲ್ಲ ಎಂದು ಆರೋಪಿಸಿದರು.

2022-23ರಲ್ಲಿ 1.51 ಕೋಟಿ ರೂ., 2023-24ರಲ್ಲಿ 2.09 ಕೋಟಿ ರೂ., 2024-25ರಲ್ಲಿ 1 ಕೋಟಿ ರೂ. ಹಾಗೂ 2025-26ರಲ್ಲಿ 2.23 ಕೋಟಿ ರೂ. ಸೇರಿದಂತೆ ಒಟ್ಟು 6.50 ಕೋಟಿ ರೂ. ವೆಚ್ಚದ ಕಾಮಗಾರಿಗಳ ದಾಖಲೆಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದು, ಸ್ಥಳ ಪರಿಶೀಲನೆ ಹಾಗೂ ಜಿಪಿಎಸ್ ಛಾಯಾಚಿತ್ರಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.

ಕಾಮಗಾರಿಗಳ ಹಣ ಬಿಡುಗಡೆಗೆ ಕಡ್ಡಾಯವಾಗಿರುವ ಅಳತೆ ಪುಸ್ತಕ (ಎಂಬಿ), ಇಂಜಿನಿಯರ್ ದೃಢೀಕರಣ, ಆರಂಭ, ಪ್ರಗತಿ ಹಾಗೂ ಪೂರ್ಣಗೊಂಡಿರುವ ಜಿಪಿಎಸ್ ಛಾಯಾಚಿತ್ರಗಳು, ತೃತೀಯ ಪಕ್ಷದ ಪರಿಶೀಲನಾ ವರದಿ, ಗುಣಮಟ್ಟ ಪರೀಕ್ಷಾ ವರದಿ, ಕಾರ್ಮಿಕರ ದಾಖಲೆಗಳು ಹಾಗೂ ಜಿಎಸ್‌ಟಿ ಬಿಲ್‌ಗಳು ಸೇರಿದಂತೆ ಹಲವು ನಿಯಮಗಳನ್ನು ಪಾಲಿಸದೆ ಸುಳ್ಳು ದಾಖಲೆಗಳ ಆಧಾರದ ಮೇಲೆ ಹಣ ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿದರು.

ಶಾಲೆಗಳು, ಅಂಗನವಾಡಿಗಳು, ಆರೋಗ್ಯ ಕೇಂದ್ರಗಳು, ಉಪ ಆರೋಗ್ಯ ಕೇಂದ್ರಗಳು, ರಸ್ತೆಗಳು, ಶೌಚಾಲಯಗಳು ಹಾಗೂ ಅಂಗವಿಕಲರಿಗೆ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲ. ಸಂಬಂಧಿತ ಇಲಾಖೆಗಳ ದೃಢೀಕರಣವಿಲ್ಲದೆ ಅಧಿಕಾರಿಗಳು ಬಿಲ್ ಪಾವತಿಸಿದ್ದಾರೆ ಎಂದು ಕೆಆರ್‌ಎಸ್ ದೂರಿದೆ.

ಈ ಅಕ್ರಮದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಜೂನಿಯರ್ ಇಂಜಿನಿಯರ್‌ಗಳು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿರುವ ಪಕ್ಷ, ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದೆ.

ಮುಂದಿನ 10 ದಿನಗಳೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಕಾಳಗಿ ತಾಲೂಕು ಪಂಚಾಯತ್ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಕೆಆರ್‌ಎಸ್ ಜಿಲ್ಲಾಧ್ಯಕ್ಷ ಸಚಿನ್ ಚವ್ಹಾಣ್ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಚಿನ್ ಚವ್ಹಾಣ್, ಕಾಳಗಿ ತಾಲೂಕು ಅಧ್ಯಕ್ಷ ಸೀತಾರಾಮ್ ಪವಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹ್ಸಿನ್ ಪಟೇಲ್ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News