ಕಲಬುರಗಿ | ಪೊಲೀಸರು ಮಾನವೀಯತೆಯಿಂದ ನಡೆದುಕೊಂಡಲ್ಲಿ ಮಾತ್ರ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿ ಸಾಧ್ಯ : ಅಲೋಕ್ ಕುಮಾರ್
ಕಲಬುರಗಿ: ಠಾಣೆಗೆ ಬರುವ ಸಾರ್ವಜನಿಕರನ್ನು ಗೌರವದಿಂದ ಕಂಡು ಅವರ ಸಮಸ್ಯೆ ಪರಿಹರಿಸುವ ಕೆಲಸವನ್ನು ಪೊಲೀಸರು ಮಾಡಬೇಕು. ಎಲ್ಲಕ್ಕಿಂತ ಮಿಗಿಲಾಗಿ ಮಾನವೀಯತೆಯಿಂದ ನಡೆದುಕೊಂಡಲ್ಲಿ ಮಾತ್ರ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಗೆ ತರಲು ಸಾಧ್ಯ ಎಂದು ಪೊಲೀಸ್ ಇಲಾಖೆಯ ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ಹೊರವಲಯದ ನಾಗನಹಳ್ಳಿಯ ಪೊಲೀಸ್ ತರಬೇತಿ ಮಹಾವಿದ್ಯಾಲಯದ ಸಭಾಂಗಣದಲ್ಲಿ 14ನೇ ತಂಡದ ಪಿ.ಎಸ್.ಐ (ಸಿವಿಲ್) 380 ಪ್ರಶಿಕ್ಷಣಾರ್ಥಿಗಳ ಬುನಾದಿ ತರಬೇತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅಲೋಕ್ ಕುಮಾರ್, ಪೊಲೀಸ್ ಕೆಲಸವನ್ನು ಇತರೆ ಇಲಾಖೆಯ ಕೆಲಸಕ್ಕೆ ಹೋಲಿಕೆ ಮಾಡುವಂತಿಲ್ಲ. 24 ಗಂಟೆಯೂ ಸಾರ್ವಜನಿಕರ ರಕ್ಷಣೆಗೆ ನಿಲ್ಲಬೇಕಾಗುತ್ತದೆ. ಖಾಕಿಗೆ ಸಮಾಜದಲ್ಲಿ ವಿಶೇಷ ಗೌರವ ಇದೆ. ಅಂತಹ ಖಾಕಿ ಧರಿಸಲು ನಮಗೆ ಸಿಕ್ಕಿರುವುದೇ ಪುಣ್ಯ ಎಂದು ಭಾವಿಸಿ ನೊಂದವರ ಕಣ್ಣೀರು ಒರೆಸುವ ಕೆಲಸ ಮಾಡಬೇಕಿದೆ ಎಂದರು.
ಜನ ಸೇವೆ ಮಾಡಬೇಕಾದರೆ ಮಾನವೀಯ ಮೌಲ್ಯ, ಅತ್ಮಸ್ಥೈರ್ಯ, ಹೊಂದಿಕೊಳ್ಳುವ ಗುಣ, ಅಧುನಿಕ ತಂತ್ರಜ್ಞಾನ ಅಳವಡಿಕೆ, ಶಿಸ್ತು, ದೈಹಿಕ ಸದೃಢತೆ ಅವಶ್ಯಕ. ಆ ನಿಟ್ಟಿನಲ್ಲಿ ಪ್ರೊಬೇಷನ್ ಅಧಿಕಾರಿಗಳು ಗಮನಹರಿಸಬೇಕು. ಇತ್ತೀಚೆಗೆ ಪೊಲೀಸರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ನೋವು ತಂದಿದೆ ಎಂದು ಹೇಳಿದರು.
ಪೊಲೀಸರಿಗೆ ಅತ್ಯುತ್ತಮ ತರಬೇತಿ ಕರ್ನಾಟಕದಲ್ಲಿ ನೀಡಲಾಗುತ್ತಿದೆ. ನ್ಯಾಷನಲ್ ಪೊಲೀಸ್ ಅಕಾಡೆಮಿ, ಐ.ಪಿ.ಎಸ್. ಅಕಾಡೆಮಿ ಮಾದರಿಯಲ್ಲಿ ಪಠ್ಯಕ್ರಮ ಸಿದ್ದಪಡಿಸಿಕೊಂಡು ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು, ಜನರೊಂದಿಗೆ ವರ್ತನೆ, ದೈಹಿಕ ಕ್ಷಮತೆ ಕಾಪಾಡಿಕೊಳ್ಳುವುದು, ಪರಿಣಿತರೊಂದಿಗೆ ಸಂವಾದ, ಜನಸಂದಣಿ ನಿಯಂತ್ರಣ ಹೀಗೆ ಪರಿಸ್ಥಿತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಕುರಿತು ಇಲ್ಲಿ ಹೇಳಿ ಕೊಡಲಾಗುತ್ತದೆ. ಅಲ್ಲದೆ ಇಲ್ಲಿಂದ ತರಬೇತಿ ಮುಗಿಸಿಕೊಂಡು ಹೋದ ನಂತರ 5 ವರ್ಷ ನಿರಂತರ ಅವರ ಕಾರ್ಯವೈಖರಿ ಬಗ್ಗೆ ಅವಲೋಕನ ಮಾಡಿ ಮೇಲಾಧಿಕಾರಿಗಳಿಗೆ ವರದಿ ನೀಡಲಾಗುತ್ತದೆ. ವಿಶೇಷವಾಗಿ ಮಹಿಳಾ ನೌಕರರಿಗೆ ತರಬೇತಿ ಸಂದರ್ಭದಲ್ಲಿಯೇ ಅವರ ಕುಟುಂಬಸ್ಥರೊಂದಿಗೆ ಇಲಾಖೆಯ ಕಾರ್ಯವೈಖರಿ ಬಗ್ಗೆ ಸಮಾಲೋಚನೆ ಮಾಡಲಾಗುತ್ತದೆ. ಹೀಗೆ ತರಬೇತಿಯಲ್ಲಿ ಇಲಾಖೆ ಅನೇಕ ಬದಲಾವಣೆಗಳನ್ನು ತಂದಿದೆ ಎಂದು ಅಲೋಕ್ ಕುಮಾರ್ ಹೇಳಿದರು.
ಇತ್ತೇಚೆಗೆ ಸೈಬರ್ ಅಪರಾಧ ಹೆಚ್ಚಾಗಿದೆ. ಆನ್ ಲೈನ್ ಮುಲಕವೂ ಸಾರ್ವಜನಿಕರ ಹಣ ಲಪಟಾಯಿಸುವ ವಂಚಕರ ಸಂಖ್ಯೆ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅವಹೇಳನ, ತೇಜೋವಧೆ, ಸುಳ್ಳುಸುದ್ದಿ ಹರಡಲಾಗುತ್ತಿದೆ. ಸಾಮಾನ್ಯ ಅಪರಾಧಗಳ ನಿಯಂತ್ರಣ ಜೊತೆಗೆ ಸೈಬರ್ ಕ್ರೈಮ್, ಸೋಷಿಯಲ್ ಮೀಡಿಯಾ ಪ್ರಕರಣಗಳಲ್ಲಿ ಜನರಿಗೆ ನ್ಯಾಯ ದೊರಕಿಸುವ ಸವಾಲು ಇಲಾಖೆಯ ಮುಂದಿದೆ ಎಂದು ಅಲೋಕ್ ಕುಮಾರ್ ಹೇಳಿದರು.
ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದ ಪ್ರಾಂಶುಪಾಲ ಮತ್ತು ಎಸ್.ಪಿ. ಡೆಕ್ಕಾ ಕಿಶೋರ ಬಾಬು ಅವರು ಪ್ರಸ್ತಾವಿಕವಾಗಿ ಮಾತನಾಡಿ, 14ನೇ ತಂಡದ ಪಿ.ಎಸ್.ಐ (ಸಿವಿಲ್) 380 ಪ್ರಶಿಕ್ಷಣಾರ್ಥಿಗಳಿಗೆ ಇಲ್ಲಿ ತರಬೇತಿ ನೀಡಲಾಗುತ್ತಿದೆ. ಇದರಲ್ಲಿ 283 ಪುರುಷ ಮತ್ತು 97 ಮಹಿಳಾ ಅಭ್ಯರ್ಥಿಗಳಿದ್ದಾರೆ. ಇಲ್ಲಿ ನೀಡಲಾಗುವ ಎಲ್ಲಾ ಹಂತದ ತರಬೇತಿಯನ್ನು ಪಡೆದುಕೊಂಡು ಉತ್ತಮ ಅಧಿಕಾರಿಗಳಾಗಿ ಇಲ್ಲಿಂದ ಹೊರಹೋಗಬೇಕೆಂದು ಪ್ರಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು.
ಕರ್ನಾಟಕ ಪೊಲೀಸ್ ಬಗ್ಗೆ ದೇಶವಷ್ಟೆ ಅಲ್ಲ ವಿದೇಶದಲ್ಲಿಯೂ ಗೌರವ ಇದೆ. ಅಂತಹ ಒಂದು ಪೊಲೀಸ್ ವ್ಯವಸ್ಥೆಯಲ್ಲಿ ಜನ ಸೇವೆ ಮಾಡಲು ಅಣಿಯಾಗಿರುವ ಪ್ರೊಬೇಷನರಿ ಅಧಿಕಾರಿಗಳು ವೃತ್ತಿಪರತೆ, ನೈತಿಕತೆ ರೂಡಿಸಿಕೊಳ್ಳಬೇಕು. ಶಿಸ್ತು, ಕಾನೂನು ಪರಿಪಾಲನೆ ಜೊತೆಗೆ ಮಾನವೀಯತೆ, ಅಂತಕರಣ ಮರೆಯದಿರಿ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ. ಶರಣಪ್ಪ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಈಶಾನ್ಯ ವಲಯದ ಉಪ ಮಹಾನಿರೀಕ್ಷಕ ಶಾಂತನು ಸಿನ್ಹಾ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಡಿ.ಸಿ.ಪಿ. ಕನಿಕಾ ಸಿಕ್ರಿವಾಲ್, ಪ್ರವೀಣ ನಾಯಕ್ ಸೇರಿದಂತೆ ಅನೇಕ ಪೊಲೀಸ್ ಅಧಿಕಾರಿಗಳು, ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.