ಕಲಬುರಗಿ | ಬಂಜಾರಾ ನೌಕರರ 4ನೇ ವಾರ್ಷಿಕ ಕ್ರೀಡಾಕೂಟಕ್ಕೆ ಅದ್ದೂರಿ ಚಾಲನೆ

Update: 2026-08-09 19:21 IST

ಕಲಬುರಗಿ: ಕ್ರೀಡೆ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಉಲ್ಲಾಸ, ಶಿಸ್ತು, ಸಮಯಪಾಲನೆ ಹಾಗೂ ಸಂಘಟನಾ ಮನೋಭಾವ ಬೆಳೆಸಲು ಸಹಕಾರಿಯಾಗಿದೆ ಎಂದು ಚಿಂಚೋಳಿ ಶಾಸಕ ಅವಿನಾಶ ಜಾಧವ್‌ ಹೇಳಿದರು.

ನಗರದ ಚಂದ್ರಶೇಖರ ಪಾಟೀಲ್‌ ಕ್ರೀಡಾಂಗಣದಲ್ಲಿ ರವಿವಾರ ಬಂಜಾರಾ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಬಂಜಾರಾ ನೌಕರರ 4ನೇ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವೃತ್ತಿ ಜೀವನದ ಒತ್ತಡದ ನಡುವೆಯೂ ನೌಕರರು ಕ್ರೀಡೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವುದು ಶ್ಲಾಘನೀಯ. ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಸಾಮರ್ಥ್ಯದ ಜತೆಗೆ ಮಾನಸಿಕ ನೆಮ್ಮದಿ ಹಾಗೂ ಸ್ಪರ್ಧಾತ್ಮಕ ಮನೋಭಾವವೂ ವೃದ್ಧಿಯಾಗುತ್ತದೆ ಎಂದರು.

ಕಲಬುರಗಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳ್ಳೂಂಡಗಿ ಮಾತನಾಡಿ, ನೌಕರರ ನಡುವೆ ಕ್ರೀಡಾ ಮನೋಭಾವ ಬೆಳೆಸುವುದರೊಂದಿಗೆ ಪರಸ್ಪರ ಸೌಹಾರ್ದತೆ, ಸ್ನೇಹಭಾವ ಮತ್ತು ಒಗ್ಗಟ್ಟು ಹೆಚ್ಚಿಸಲು ಇಂತಹ ಕ್ರೀಡಾಕೂಟಗಳು ಸಹಕಾರಿಯಾಗುತ್ತವೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಜಾರಾ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಹರಿಶ್ಚಂದ್ರ ಎಸ್. ರಾಠೋಡ ಮಾತನಾಡಿ, ಬಂಜಾರಾ ಸಮುದಾಯದ ನೌಕರರಲ್ಲಿ ಪರಸ್ಪರ ಸೌಹಾರ್ದತೆ, ಸ್ನೇಹಭಾವ ಹಾಗೂ ಸಂಘಟನಾ ಮನೋಭಾವ ಬೆಳೆಸುವ ಉದ್ದೇಶದಿಂದ ಪ್ರತಿವರ್ಷ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ. ಇದು ನೌಕರರ ದೈಹಿಕ ಹಾಗೂ ಮಾನಸಿಕ ಕ್ಷಮತೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಜಿಲ್ಲೆಯ ವಿವಿಧೆಡೆ ಕಾರ್ಯನಿರ್ವಹಿಸುತ್ತಿರುವ ಬಂಜಾರಾ ಸಮುದಾಯದ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರು ತಂಡೋಪತಂಡವಾಗಿ ಉತ್ಸಾಹದಿಂದ ಪಾಲ್ಗೊಂಡರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಲಬುರಗಿ ಉಪನಿರ್ದೇಶಕ ರಾಜಕುಮಾರ ಜಿ. ರಾಠೋಡ, ಕಲಬುರಗಿ ಜಿಲ್ಲೆಯ ಎಸಿಎಫ್ ಸುನೀಲಕುಮಾರ ಜಿ. ಚವ್ಹಾಣ, ಸಂಘದ ಗೌರವಾಧ್ಯಕ್ಷ ಡಾ. ಪ್ರೇಮಸಿಂಗ ಚವ್ಹಾಣ, ಪ್ರಧಾನ ಕಾರ್ಯದರ್ಶಿ ಬಾಬು ಎಂ. ಜಾಧವ, ತಾರಾನಾಥ್ ಚೌಹಾಣ್, ಧನರಾಜ್ ಚೌಹಾಣ್, ಸತೀಶ್ ಚೌಹಾಣ್, ಶಿವರಾಮ ರಾಠೋಡ್, ಪ್ರಭು ಜಾಧವ್ ಸೇರಿದಂತೆ ಸಂಘದ ಪದಾಧಿಕಾರಿಗಳು, ನಿವೃತ್ತ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ನೌಕರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News