Kalaburagi | 6.50 ಕೋಟಿ ರೂ. ಕಾಮಗಾರಿಗಳಲ್ಲಿ ಅಕ್ರಮ ಆರೋಪ : ಕೆಆರ್‌ಎಸ್ ಪ್ರತಿಭಟನೆ

Update: 2026-08-08 23:06 IST

ಕಲಬುರಗಿ : ಕಾಳಗಿ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಅನಿರ್ಬಂಧಿತ ಕ್ರಿಯಾ ಯೋಜನೆಯಡಿ ಕೈಗೊಂಡಿರುವ ಸುಮಾರು 6.50 ಕೋಟಿ ರೂ. ಮೊತ್ತದ ಕಾಮಗಾರಿಗಳಲ್ಲಿ ಅಕ್ರಮ ಹಾಗೂ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದರು.

ಕೆಆರ್‌ಎಸ್ ಕಲಬುರಗಿ ಜಿಲ್ಲಾಧ್ಯಕ್ಷ ಸಚಿನ್ ಚವಾಣ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಕಾಮಗಾರಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ತಲೆ ಮೇಲೆ ಹೊತ್ತು, ಕೊರಳಿಗೆ ಹಾರ ಹಾಕಿಕೊಂಡು ದೇವರ ಮೊರೆ ಹೋಗುವ ರೀತಿಯಲ್ಲಿ ಜಿಲ್ಲಾ ಪಂಚಾಯಿತಿ ಕಚೇರಿಗೆ ತೆರಳಿದರು. ಬಳಿಕ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅವರಿಗೆ ದೀರ್ಘ ದಂಡ ನಮಸ್ಕಾರ ಸಲ್ಲಿಸಿ, ಆರೋಪಿತ ಕಾಮಗಾರಿಗಳ ಸಮಗ್ರ ತನಿಖೆಗೆ ಆಗ್ರಹಿಸಿದರು.

‘ಸರಕಾರಿ ಕೆಲಸ ದೇವರ ಕೆಲಸ’ ಎಂಬ ಧ್ಯೇಯವಾಕ್ಯವನ್ನು ಅಧಿಕಾರಿಗಳು ಪಾಲಿಸಬೇಕು ಎಂದು ಒತ್ತಾಯಿಸಿದ ಕಾರ್ಯಕರ್ತರು, ಸುಮಾರು 1,000 ಪುಟಗಳ ಕಾಮಗಾರಿ ದಾಖಲೆಗಳು, ಮೆಜರ್‌ಮೆಂಟ್ ಬುಕ್‌ಗಳು (ಎಂಬಿ), ಜಿಪಿಎಸ್ ಛಾಯಾಚಿತ್ರಗಳು ಹಾಗೂ ಬಿಲ್‌ಗಳ ವಿವರಗಳನ್ನು ಸಿಇಒ ಅವರ ಗಮನಕ್ಕೆ ತಂದರು.

ಕಳೆದ ಒಂದು ತಿಂಗಳಿನಿಂದ ಕಾಳಗಿ ತಾಲೂಕು ಪಂಚಾಯಿತಿಯ ಅನಿರ್ಬಂಧಿತ ಕ್ರಿಯಾ ಯೋಜನೆಯಡಿ ನಡೆದಿರುವ ಕಾಮಗಾರಿಗಳಲ್ಲಿನ ಅಕ್ರಮಗಳ ವಿರುದ್ಧ ಹೋರಾಟ ನಡೆಸಲಾಗುತ್ತಿದೆ. ಇದೀಗ ದಾಖಲೆಗಳ ಸಮೇತ ದೂರು ಸಲ್ಲಿಸಿರುವ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿ ದಾಖಲೆಗಳಲ್ಲಿರುವ ಮಾಹಿತಿಯನ್ನು ಕಾಮಗಾರಿಗಳ ವಾಸ್ತವಿಕ ಸ್ಥಿತಿಯೊಂದಿಗೆ ತಾಳೆ ಮಾಡಬೇಕು ಎಂದು ಕೆಆರ್‌ಎಸ್ ಮುಖಂಡರು ಒತ್ತಾಯಿಸಿದರು.

ಕಾಮಗಾರಿಗಳಲ್ಲಿ ಅಕ್ರಮಗಳು ದೃಢಪಟ್ಟರೆ ಸಂಬಂಧಪಟ್ಟ ಅಧಿಕಾರಿಗಳು, ಎಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ (ಇಒ), ಎಂಜಿನಿಯರ್‌ಗಳು ಹಾಗೂ ಸಂಬಂಧಪಟ್ಟ ಗುತ್ತಿಗೆದಾರರ ಪಾತ್ರದ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

6.50 ಕೋಟಿ ರೂ. ಮೊತ್ತದ ಕಾಮಗಾರಿಗಳ ಗುಣಮಟ್ಟ, ಕಾಮಗಾರಿ ನಡೆದಿರುವ ಪ್ರಮಾಣ, ಬಿಲ್ ಪಾವತಿ, ಮೆಜರ್‌ಮೆಂಟ್ ಬುಕ್ ಹಾಗೂ ಜಿಪಿಎಸ್ ದಾಖಲೆಗಳನ್ನು ಪರಿಶೀಲಿಸಿ ವಾಸ್ತವಾಂಶವನ್ನು ಬಹಿರಂಗಪಡಿಸಬೇಕು ಎಂದು ಕೆಆರ್‌ಎಸ್ ಮುಖಂಡರು ಒತ್ತಾಯಿಸಿದರು.

ದೂರು ಸ್ವೀಕರಿಸಿರುವ ಜಿಪಂ ಸಿಇಒ ಅವರು ‘ಸರಕಾರಿ ಕೆಲಸ ದೇವರ ಕೆಲಸ’ ಎಂಬ ಧ್ಯೇಯವಾಕ್ಯದ ಆಶಯಕ್ಕೆ ಅನುಗುಣವಾಗಿ ಆರೋಪಗಳ ಕುರಿತು ಪಾರದರ್ಶಕ ತನಿಖೆ ನಡೆಸಬೇಕು. ಅಕ್ರಮ ನಡೆದಿರುವುದು ದೃಢಪಟ್ಟಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೆಆರ್‌ಎಸ್ ಮುಖಂಡರು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಕೆಆರ್‌ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಶಿನ್ ಪಟೇಲ್, ಜಿಲ್ಲಾ ಉಪಾಧ್ಯಕ್ಷ ದೇವಪ್ಪ ನೆಲೋಗಿ, ಕಾಳಗಿ ತಾಲೂಕು ಅಧ್ಯಕ್ಷ ಸೀತಾರಾಮ್ ಪವಾರ್, ಜೇವರ್ಗಿ ತಾಲೂಕು ಉಪಾಧ್ಯಕ್ಷ ಪರಮೇಶ್ವರ ಕವಲಗಿ, ಫಿನಿಕ್ಸ್ ಶರಣಪ್ಪ, ಅನಿಲ್ ಕಾಂಬ್ಳೆ, ಜಿಲ್ಲಾ ಉಪಾಧ್ಯಕ್ಷ ತುಕಾರಾಮ್ ಘೋಡಕೆ, ಸದಾನಂದ ರಾಥೋಡ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News