Kalaburagi | ‘ಸಣ್ಣಗೌಡಸಾನಿ’ ನಾಟಕ ಆ.10, 11ರಂದು ಪ್ರದರ್ಶನ : ಡಾ.ಸುಜಾತ ಜಂಗಮಶೆಟ್ಟಿ
ಕಲಬುರಗಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ರಂಗಾಯಣ ಕಲಬುರಗಿ ಸಹಯೋಗದಲ್ಲಿ ನಾಡೋಜ ಡಾ. ಶಾಂತರಸ ಅವರ ಪ್ರಸಿದ್ಧ ಕಾದಂಬರಿ ಆಧಾರಿತ ‘ಸಣ್ಣಗೌಡಸಾನಿ’ ನಾಟಕವು ಆ.10 ಮತ್ತು 11ರಂದು ಸಂಜೆ 6 ಗಂಟೆಗೆ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಕಲಬುರಗಿ ರಂಗಾಯಣದ ನಿರ್ದೇಶಕಿ ಡಾ. ಸುಜಾತ ಜಂಗಮಶೆಟ್ಟಿ ತಿಳಿಸಿದರು.
ನಗರದ ರಂಗಾಯಣದ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಂಗಾಯಣದ ರೆಪರ್ಟರಿ ಕಲಾವಿದರು ನಾಟಕವನ್ನು ಪ್ರದರ್ಶಿಸಲಿದ್ದಾರೆ. ಮಾಹಿತಿ ಆಯೋಗದ ಅಧ್ಯಕ್ಷ ಬಿ. ವೆಂಕಟ ಸಿಂಗ್ ಅವರು ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದು, ತಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಬಾಗಲಕೋಟೆ ರಂಗಸಮಾಜದ ಸದಸ್ಯ ಮಹಾಂತೇಶ ಎಂ. ಗಜೇಂದ್ರಗಡ ಹಾಗೂ ‘ಕನ್ನಡಪ್ರಭ’ ವರದಿಗಾರ ಶೇಷಮೂರ್ತಿ ಅವಧಾನಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
‘ಸಣ್ಣಗೌಡಸಾನಿ’ ನಾಟಕದ ರಂಗಗೀತೆಗಳು ಹಾಗೂ ಶಾಂತರಸರ ಗಜಲ್‌ಗಳನ್ನು ಧಾರವಾಡದ ರಾಘವ ಕಮ್ಮಾರ ಮತ್ತು ತಂಡ ಗಾಯನ ರೂಪದಲ್ಲಿ ಪ್ರಸ್ತುತಪಡಿಸಲಿದೆ. ರಂಗಸಜ್ಜಿಕೆ ಹಾಗೂ ರಂಗಪರಿಕರಗಳ ಜವಾಬ್ದಾರಿಯನ್ನು ರಾಜಕುಮಾರ್ ಎಸ್.ಕೆ. ವಹಿಸಿದ್ದು, ಬೆಳಕು ಹಾಗೂ ಸಹ ನಿರ್ದೇಶನವನ್ನು ಶ್ರೀನಿವಾಸ ದೋರನಹಳ್ಳಿ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ನಾಟಕದ ರಂಗಪಠ್ಯ, ವಸ್ತು ವಿನ್ಯಾಸ ಹಾಗೂ ನಿರ್ದೇಶನವನ್ನು ಪ್ರವೀಣ ರೆಡ್ಡಿ ಗುಂಜನಹಳ್ಳಿ ನಿರ್ವಹಿಸಿದ್ದಾರೆ. ನಾಟಕದ ಮೂಲಕ ಶಾಂತರಸರ ಸಾಹಿತ್ಯ ಹಾಗೂ ರಂಗಭೂಮಿಯ ಸೊಗಡನ್ನು ಪ್ರೇಕ್ಷಕರಿಗೆ ಪರಿಚಯಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ‘ಸಣ್ಣಗೌಡಸಾನಿ’ ನಾಟಕದ ಭಿತ್ತಿಪತ್ರವನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಂಗಾಯಣದ ಆಡಳಿತಾಧಿಕಾರಿ ಸಿದ್ಧರಾಮ ಶಿಂಧೆ, ಮಹಾಂತೇಶ ನವಲಕಲ್, ಪ್ರವೀಣ ರೆಡ್ಡಿ ಗುಂಜನಹಳ್ಳಿ, ರಾಘವ ಕಮ್ಮಾರ, ಅಮರನಾಥ ಇರ್ಕಲ್ ಸೇರಿದಂತೆ ರಂಗಾಯಣದ ಸಿಬ್ಬಂದಿ ಹಾಗೂ ಕಲಾವಿದರು ಉಪಸ್ಥಿತರಿದ್ದರು.