Kalaburagi | ‘ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಸರ್ಕಾರ ಸ್ಮಾರ್ಟ್ ಆಗಿ ಲೂಟಿ ಮಾಡುತ್ತಿದೆಯೇ?’ : ದೇವಿಂದ್ರ ದೇಸಾಯಿ ಕಲ್ಲೂರ

Update: 2026-08-08 22:58 IST

ಕಲಬುರಗಿ : ಕೆಕೆಆರ್‌ಡಿಬಿ ಸೇರಿದಂತೆ ವಿವಿಧ ಹಣಕಾಸು ಮೂಲಗಳಿಂದ ಕಲಬುರಗಿ ನಗರವನ್ನು ಸ್ಮಾರ್ಟ್ ಸಿಟಿಯನ್ನಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ನೆಲಮಟ್ಟದಲ್ಲಿ ಯಾವುದೇ ಗಮನಾರ್ಹ ಕಾಮಗಾರಿಗಳು ಕಾಣಿಸುತ್ತಿಲ್ಲ. ಹೀಗಾಗಿ ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ‘ಸ್ಮಾರ್ಟ್’ ಆಗಿ ಲೂಟಿ ಮಾಡುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಬಿಜೆಪಿ ಓಬಿಸಿ ಮೋರ್ಚಾ ನಗರಾಧ್ಯಕ್ಷ ದೇವಿಂದ್ರ ದೇಸಾಯಿ ಕಲ್ಲೂರ ಆರೋಪಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಮೂಲಸೌಕರ್ಯ ಹಾಗೂ ನಗರಾಭಿವೃದ್ಧಿ ಯೋಜನೆಯಡಿ ಕಲಬುರಗಿ ನಗರವನ್ನು 1,685 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಹಾಗೂ ಡಿಜಿಟಲ್ ಸೌಲಭ್ಯಗಳನ್ನು ಹೊಂದಿರುವ ಸ್ಮಾರ್ಟ್ ಸಿಟಿಯನ್ನಾಗಿ ಪರಿವರ್ತಿಸುವುದಾಗಿ ಸರ್ಕಾರ ಘೋಷಿಸಿದೆ. ಆದರೆ, ಯೋಜನೆಯಡಿ ವಾಸ್ತವವಾಗಿ ಎಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂಬುದು ಸಾರ್ವಜನಿಕರಿಗೆ ಕಾಣಿಸುತ್ತಿಲ್ಲ. ಯೋಜನಾ ಪ್ರದೇಶಗಳಲ್ಲಿ ಕನಿಷ್ಠ ಮಟ್ಟದ ಕಾಮಗಾರಿಯೂ ನಡೆದಿರುವುದು ಕಂಡುಬರುತ್ತಿಲ್ಲ ಎಂದು ಟೀಕಿಸಿದ್ದಾರೆ.

ಎರಡನೇ ರಿಂಗ್ ರಸ್ತೆ ನಿರ್ಮಾಣಕ್ಕೆ ಸುಮಾರು 1,100 ಕೋಟಿ ರೂ. ವೆಚ್ಚದಲ್ಲಿ 41 ಕಿ.ಮೀ. ಉದ್ದದ ಕಾಮಗಾರಿ ಆರಂಭಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಕಾಮಗಾರಿ ನಡೆದಿರುವ ಕುರುಹುಗಳು ಎಲ್ಲಿಯೂ ಕಾಣುತ್ತಿಲ್ಲ. ಭೂಸ್ವಾಧೀನ ಪ್ರಕ್ರಿಯೆಯೂ ನಿರೀಕ್ಷಿತ ವೇಗದಲ್ಲಿ ನಡೆದಿಲ್ಲ ಎಂದು ಆರೋಪಿಸಿದ್ದಾರೆ.

ಅದೇ ರೀತಿ, ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ 352 ಕೋಟಿ ರೂ. ವೆಚ್ಚದಲ್ಲಿ ನಗರದ ಸೌಂದರ್ಯೀಕರಣ, ರಸ್ತೆ ಸುಧಾರಣೆ, ಪ್ರಮುಖ ವೃತ್ತಗಳ ಆಧುನೀಕರಣ ಹಾಗೂ ವಿದ್ಯುತ್ ಕಂಬಗಳ ನವೀಕರಣ ಕಾಮಗಾರಿಗಳು ನಡೆಯುತ್ತಿವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ವಾಸ್ತವ ಸ್ಥಿತಿ ಇದಕ್ಕೆ ವ್ಯತಿರಿಕ್ತವಾಗಿದೆ ಎಂದು ದೇವಿಂದ್ರ ದೇಸಾಯಿ ಕಲ್ಲೂರ ಹೇಳಿದ್ದಾರೆ.

ಬಿಜೆಪಿ ಓಬಿಸಿ ಮೋರ್ಚಾ ನಿಯೋಗವು ನಗರದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದಾಗ ಹಲವು ಕಡೆ ರಸ್ತೆಗಳು ಹದಗೆಟ್ಟಿರುವುದು ಕಂಡುಬಂದಿದೆ. ಅನೇಕ ರಸ್ತೆಗಳ ಡಾಂಬರೀಕರಣ ಸಮರ್ಪಕವಾಗಿ ನಡೆದಿಲ್ಲ. ನಗರದ ಪ್ರಮುಖ ರಸ್ತೆಗಳಲ್ಲಿಯೇ ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಗುಂಡಿಗಳನ್ನು ಮುಚ್ಚಲು ಮಹಾನಗರ ಪಾಲಿಕೆ ಅಥವಾ ಲೋಕೋಪಯೋಗಿ ಇಲಾಖೆ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಅಭಿವೃದ್ಧಿಗೆ ಮೀಸಲಾದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಕಾಮಗಾರಿಗಳನ್ನು ಗುಣಮಟ್ಟದಿಂದ ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಯೋಜನೆಗಳ ಪ್ರಗತಿ ಹಾಗೂ ವೆಚ್ಚದ ಕುರಿತು ಸಾರ್ವಜನಿಕರಿಗೆ ಪಾರದರ್ಶಕ ಮಾಹಿತಿ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News