Kalaburagi | ಸೀತಾಫಲ ಕಾಯಿಗಳಲ್ಲಿ ಕಪ್ಪು ಕೊಳೆ : ಹವಾಮಾನ ವೈಪರೀತ್ಯದಿಂದ ರೈತರಿಗೆ ಆತಂಕ
ಕಲಬುರಗಿ: ಹವಾಮಾನ ವೈಪರೀತ್ಯದ ಪರಿಣಾಮವಾಗಿ ಸೀತಾಫಲ (ಕಸ್ಟರ್ಡ್ ಆಪಲ್) ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆರಂಭಿಕ ಹಂತದ ಮಿನಿ ಕಾಯಿಗಳು ಹಾಗೂ ಹಣ್ಣುಗಳು ಕಂದು ಬಣ್ಣಕ್ಕೆ ತಿರುಗಿ, ಬಳಿಕ ಕಪ್ಪಾಗಿ ಕೊಳೆತು ಉದುರುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ.
ಈ ವರ್ಷ ಮುಂಗಾರು ಆರಂಭವಾದರೂ ಉತ್ತರ ಕರ್ನಾಟಕ ಭಾಗದಲ್ಲಿ ಕಳೆದ ಸುಮಾರು 55 ದಿನಗಳಿಂದ ಮಳೆ ಮೋಡಗಳು ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದು, 29 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ಉಷ್ಣಾಂಶ ಕಂಡುಬರುತ್ತಿದೆ. ಇದರಿಂದ ಮಣ್ಣಿನ ತೇವಾಂಶ ಕಡಿಮೆಯಾಗುತ್ತಿದ್ದು, ಬಾವಿ ಹಾಗೂ ಬೋರ್‌ವೆಲ್‌ಗಳಲ್ಲಿಯೂ ನೀರಿನ ಲಭ್ಯತೆ ಕುಸಿಯುತ್ತಿದೆ. ಬೇರುಗಳ ವ್ಯಾಪ್ತಿಯಲ್ಲಿ ಕನಿಷ್ಠ ತೇವಾಂಶವನ್ನು ಕಾಪಾಡಿಕೊಂಡರೆ ನೆಲ್ಲಿ, ಬಾರೆ ಹಾಗೂ ಸೀತಾಫಲದಂತಹ ತೋಟಗಾರಿಕಾ ಬೆಳೆಗಳನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಕೃಷಿ ತಜ್ಞರು ಸಲಹೆ ನೀಡಿದ್ದಾರೆ.
ಸೀತಾಫಲ ಕಾಯಿಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕಪ್ಪು ಕೊಳೆ ರೋಗದ ಹತೋಟಿಗೆ ಕಾರ್ಬೆಂಡಜಿಮ್ 2 ಗ್ರಾಂ ಅಥವಾ ಟ್ರೈಕೋಡರ್ಮ 5 ಗ್ರಾಂ ಅನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬಹುದು. ರೋಗಬಾಧಿತ ಹಾಗೂ ಕೊಳೆತು ಒಣಗಿ ಬಿದ್ದಿರುವ ಹಣ್ಣುಗಳನ್ನು ತೋಟದಲ್ಲೇ ಬಿಡದೆ ಸಂಗ್ರಹಿಸಿ ಸೂಕ್ತ ರೀತಿಯಲ್ಲಿ ನಾಶಪಡಿಸುವುದು ಅತ್ಯಂತ ಅಗತ್ಯ ಎಂದು ಸಸ್ಯ ರೋಗ ತಜ್ಞರು ತಿಳಿಸಿದ್ದಾರೆ.
ಈ ಕುರಿತು ಕೃಷಿ ವಿಜ್ಞಾನಿ ಹಾಗೂ ಸಹ ಪ್ರಾಧ್ಯಾಪಕ ಡಾ.ಜಹೀರ್ ಅಹಮದ್ ರೈತರಿಗೆ ಸಲಹೆ ನೀಡಿದ್ದು, ಸದ್ಯದ ಹವಾಮಾನ ಪರಿಸ್ಥಿತಿಯಲ್ಲಿ ತೋಟದಲ್ಲಿ ತೇವಾಂಶ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದಿದ್ದಾರೆ.