Kalaburagi | ನರೋಣಾದಲ್ಲಿ ಒಂಟಿ ಮಹಿಳೆಯ ಮೃತದೇಹ ಪತ್ತೆ; ಹತ್ಯೆ ಶಂಕೆ
ಕಲಬುರಗಿ : ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನರೋಣಾ ಗ್ರಾಮದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದು, ಬರ್ಬರ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಮೃತೆಯನ್ನು ಅಷ್ಟಗಾ ಗ್ರಾಮದ ನಾಗಮ್ಮ (ವಯಸ್ಸು 35) ಎಂದು ಗುರುತಿಸಲಾಗಿದೆ. ಇವರು ಪ್ರಸ್ತುತ ನರೋಣ ಗ್ರಾಮದಲ್ಲಿ ವಾಸವಿದ್ದು, ಸಮೀಪದ ಶಾರದಾ ಖಾಸಗಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನಾಗಮ್ಮ ಮನೆಯಲ್ಲಿ ಒಂಟಿಯಾಗಿದ್ದ ವೇಳೆ ದುಷ್ಕರ್ಮಿಗಳು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಘಟನೆ ನಡೆದ ಸುಮಾರು ಎರಡು ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಆದರೆ ಕೊಲೆಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.
ಮಾಹಿತಿ ತಿಳಿದ ತಕ್ಷಣ ನರೋಣಾ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಿಂದ ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.