ಕಲಬುರಗಿ | ಕೈದಿಗಳ ಜೂಜಾಟದ ವೀಡಿಯೊ ವೈರಲ್ ಪ್ರಕರಣ : ನಾಲ್ವರ ವಿರುದ್ಧ ಪ್ರಕರಣ ದಾಖಲು
ಉನ್ನತ ಮಟ್ಟದ ತನಿಖೆ ಆರಂಭ
ಕಲಬುರಗಿ, ಜ.2: ನಗರದ ಹೊರ ವಲಯದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಅಕ್ರಮವಾಗಿ ಜೂಜಾಟ, ಮದ್ಯ, ಸಿಗರೇಟ್ ಸೇದುವುದು ಸೇರಿದಂತೆ ಹಲವು ಅನೈತಿಕ ಚಟುವಟಿಕೆಗಳ ನಡೆಸುತ್ತಿರುವ ವೀಡಿಯೋ ವೈರಲ್ ಆದ ಬಳಿಕ ಇಲ್ಲಿನ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರಾಗೃಹದ ಅಧೀಕ್ಷಕಿ ಡಾ.ಅನಿತಾ ಅವರು ನೀಡಿದ ದೂರಿನ ಮೇರೆಗೆ ಜೈಲಿನೊಳಗೆ ಕುಳಿತು ಇಸ್ಪಿಟ್ ಆಡುತ್ತಾ, ಸಿಗರೇಟ್ ಹಾಗೂ ಮದ್ಯ ಸೇವಿಸುತ್ತಿದ್ದ ಪ್ರಜ್ವಲ್, ಆಕಾಶ್, ರಾಕೇಶ್ ಸೇರಿದಂತೆ ನಾಲ್ವರು ಕೈದಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಐಜಿಪಿ ಆನಂದ್ ರೆಡ್ಡಿ ನೇತೃತ್ವದಲ್ಲಿ ತನಿಖೆ ಆರಂಭ :
ಜೈಲಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕಾರಾಗೃಹ ಇಲಾಖೆ, ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಹೆಚ್ಚುವರಿ ಮಹಾನಿರೀಕ್ಷಕ(ಐಜಿಪಿ) ಆನಂದ್ ರೆಡ್ಡಿ ಅವರ ನೇತೃತ್ವದಲ್ಲಿ ಶುಕ್ರವಾರ ತನಿಖೆ ಆರಂಭವಾಗಿದೆ.
ಜ.3ರಂದು ಡಿಜಿಪಿ ಅಲೋಕ್ ಕುಮಾರ್ ಭೇಟಿ :
ಕಾರಾಗೃಹದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಜ.3ರಂದು ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರು ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಲಿದ್ದಾರೆ. ಅವರು ಸ್ವತಃ ಸ್ಥಳ ಪರಿಶೀಲನೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.