×
Ad

ಭೀಮಾ ಕೋರೆಗಾಂವ್‌ ಕಥೆಗಳನ್ನು ಕೇಳುತ್ತಲೇ ಯುವ ಪೀಳಿಗೆಯೊಳಗೆ ಹೋರಾಟದ ಕಿಚ್ಚು ಹಚ್ಚುತ್ತದೆ : ಡಾ.ಅರುಣ ಜೋಳದಕೂಡ್ಲಗಿ

Update: 2026-01-02 20:28 IST

ವಾಡಿ : ಭೀಮಾ ಕೋರೆಗಾಂವ್‌ ವಿಜಯೋತ್ಸವ ಆಚರಿಸುವುದೆಂದರೆ ಸ್ವಾಭಿಮಾನದ ಹೋರಾಟವನ್ನು ನೆನೆಸಿಕೊಳ್ಳುವ ದಿನವಾಗಿದ್ದು, ಆ ಹೋರಾಟದ ಕಥೆಗಳನ್ನು ಕೇಳುತ್ತಲೇ ಯುವ ಪೀಳಿಗೆಯೊಳಗೆ ಹೋರಾಟದ ಕಿಚ್ಚು ಹಚ್ಚುತ್ತದೆ ಎಂದು ಡಾ. ಅಂಬೇಡ್ಕರ್ ಪದವಿ ಕಾಲೇಜಿನ ಉಪನ್ಯಾಸಕ ಹಾಗೂ ಯುವ ಬರಹಗಾರ ಡಾ.ಅರುಣ ಜೋಳದಕೂಡ್ಲಗಿ ಹೇಳಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಅಂತರರಾಷ್ಟ್ರೀಯ ಬೌದ್ಧ ಯುವ ಸಂಘಟನೆ ಹಾಗೂ ಸ್ಥಳೀಯ ಬೌದ್ಧ ಸಮಾಜದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಭೀಮಾ ಕೋರೆಗಾಂವ್‌ 208ನೇ ವಿಜಯೋತ್ಸವ ಅಂಗವಾಗಿ ನಡೆದ ಶೌರ್ಯ ದಿನ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಅಂದು ಪೇಶ್ವೆಗಳ ಆಡಳಿತದ ಮಾದರಿಯಲ್ಲೇ ಇಂದು ಬಿಜೆಪಿ ಆಡಳಿತ ನಡೆಯುತ್ತಿದೆ ಎಂಬ ವಿಚಾರದ ಕುರಿತು 2018ರಲ್ಲಿ ಭೀಮಾ ಕೋರೆಗಾಂವ್‌ ನಲ್ಲಿ ದೇಶದ ಹಲವು ವಿದ್ವಾಂಸರು ನಡೆಸಿದ ಮಹತ್ವದ ಚರ್ಚೆಯಿಂದ ಕೇಂದ್ರ ಬಿಜೆಪಿ ಸರ್ಕಾರ ಭಯಗೊಂಡು ಅನೇಕ ವಿದ್ವಾಂಸರು ಹಾಗೂ ಹೋರಾಟಗಾರರನ್ನು ವರ್ಷಗಟ್ಟಲೆ ಜೈಲಿನಲ್ಲಿ ಬಂಧಿಸಿದೆ. ಇಂದಿಗೂ ಹಲವರು ಜೈಲಿನಲ್ಲೇ ಇದ್ದಾರೆ ಎಂದು ಆರೋಪಿಸಿದರು.

ಶಿವಾಜಿ ಕಾಲದಲ್ಲಿ ಸೈನ್ಯ ಮತ್ತು ಆಡಳಿತದ ವಿವಿಧ ವಿಭಾಗಗಳಲ್ಲಿ ಮೇಲ್ಜಾತಿಯ ಮರಾಠ ಹಾಗೂ ಬ್ರಾಹ್ಮಣರು ಷಡ್ಯಂತ್ರ ರೂಪಿಸುತ್ತಿದ್ದರು. ಇದನ್ನು ಅರಿತ ಶಿವಾಜಿ, ಅವರನ್ನು ತಡೆಗಟ್ಟಲು ಮಹಾರರನ್ನು ಸೈನ್ಯಕ್ಕೆ ಸೇರಿಸಿಕೊಂಡಿದ್ದರು. ಈ ಇತಿಹಾಸವನ್ನು ಅಧ್ಯಯನ ಮಾಡಿದ ಬ್ರಿಟಿಷರು 1750ರಲ್ಲಿ ಮೊದಲ ಬಾರಿಗೆ ಮಹಾರರನ್ನು ಸೈನ್ಯಕ್ಕೆ ಸೇರಿಸಿಕೊಂಡರು. 1818ರಲ್ಲಿ ನಡೆದ ಯುದ್ಧವು ಬ್ರಿಟಿಷ್ ಪರವಲ್ಲ, ನಾತನವಾದಿ ಪೇಶ್ವೆಗಳ ವಿರುದ್ಧ ಸ್ವಾಭಿಮಾನಕ್ಕಾಗಿ ನಡೆದ ಹೋರಾಟ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕರಾದ ಮರಿಯಪ್ಪ ಹಳ್ಳಿ ಮಾತನಾಡಿ, ಭೀಮಾ ಕೋರೆಗಾಂವ್‌ ವಿಜಯೋತ್ಸವವನ್ನು ಭಾವನಾತ್ಮಕವಾಗಿ ಆಚರಿಸದೆ, ಅದರ ಐತಿಹಾಸಿಕ ಸತ್ಯವನ್ನು ಅರಿತು ಸಂವಿಧಾನ ರಕ್ಷಣಾ ಪಡೆಗಳಾಗಿ ನಿಲ್ಲಬೇಕು ಎಂದರು.

ಆರೆಸ್ಸೆಸ್‌ ಸನಾತನಿಗಳ ಪ್ರಭಾವದಲ್ಲಿರುವ ಬಿಜೆಪಿ, ಅಸ್ಪೃಶ್ಯ ದಲಿತ ಸಮುದಾಯವನ್ನು ಗುರಿಯಾಗಿಸಿಕೊಂಡು ಸಂವಿಧಾನದಲ್ಲಿ ಅಪಾಯಕಾರಿ ಬದಲಾವಣೆ ತರಲು ಯತ್ನಿಸುತ್ತಿದೆ. ಇದನ್ನು ತಡೆಯಲು ಎಲ್ಲರೂ ಒಗ್ಗಟ್ಟಾಗುವುದು ಇಂದಿನ ಅಗತ್ಯ ಎಂದು ಎಚ್ಚರಿಸಿದರು.

ಉಪನ್ಯಾಸಕ ವಸಂತ ನಾಸಿ, ಸಾಮಾಜಿಕ ಕಾರ್ಯಕರ್ತ ಪ್ರಬುದ್ಧ ಲಕ್ಷ್ಮಿಕಾಂತ ಹುಬ್ಳಿ, ಸ್ಥಳೀಯ ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ ಮಾತನಾಡಿದರು. ಕಲಬುರಗಿ ಸಿದ್ಧಾರ್ಥ ವಿಹಾರನ ಪೂಜ್ಯ ಭಂತೆ ಚನ್ನ, ಸಾನಿದ್ಯ ವಹಿಸಿದ್ದರು.

ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸೈಯದ್‌ ಮೆಹಮೂದ್ ಚಿಸ್ತಿ, ಮರಿಯಪ್ಪ ಬುಕ್ಕುಲಕರ, ಶರಣಬಸು ಸಿರೂರಕರ, ರವಿ ಸಿಂಗೆ, ಶ್ರಾವಣಕುಮಾರ ಮೋಸಲಗಿ, ಸಾಯಬಣ್ಣ ಬನ್ನಟ್ಟಿ, ಮಲ್ಲೇಶಿ ಚುಕ್ಕೇರ, ನಾಗೇಂದ್ರ ಜೈಗಂಗ, ಭಾಗಪ್ಪ ಯಾದಗಿರಿ, ಶರಣು ನಾಟೇಕರ, ಚಂದ್ರಸೇನ ಮೇನಗಾರ, ಉದಯ ಯಾದಗಿರಿ, ಅನೀಲ ಸಿಬನೂರ, ಮಲ್ಲು ತಳವಾರ, ಮಲ್ಲಣ್ಣ ಮಸ್ಕಿ, ಸುನೀಲ ಚವಣೂರ, ಅರುಣ ಬರ್ಮಾ, ಶಿವು ಬೆಳಗೇರಿ, ಅಂತರರಾಷ್ಟ್ರೀಯ ಬೌದ್ಧ ಯುವ ಸಂಘಟನೆಯ ರಾಜ್ಯ ಸಂಯೋಜಕರಾದ ಸಂದೀಪ ಕಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಚಂದ್ರು ಸಂಗನ ಸ್ವಾಗತಿಸಿಸರು. ರಾಜಕುಮಾರ ಸಂಕಾ ನಿರೂಪಿಸಿದರು.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News