Kalaburagi | ಆ.2ರಂದು ಸಿವಿಲ್ ಪೊಲೀಸ್ ಪೇದೆ ನೇಮಕಾತಿ ಪರೀಕ್ಷೆ: ಅಕ್ರಮಕ್ಕೆ ಅವಕಾಶ ನೀಡದಂತೆ ಡಿಸಿ ಸೂಚನೆ

40 ಕೇಂದ್ರಗಳಲ್ಲಿ ಪರೀಕ್ಷೆ; 30 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳ ನೋಂದಣಿ

Update: 2026-07-29 19:56 IST

ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ಆಗಸ್ಟ್ 2ರಂದು ನಡೆಯಲಿರುವ ಸಿವಿಲ್ ಪೊಲೀಸ್ ಪೇದೆ (ಸಿಪಿಸಿ) ನೇಮಕಾತಿ ಲಿಖಿತ ಪರೀಕ್ಷೆಯನ್ನು ಯಾವುದೇ ಅಕ್ರಮಕ್ಕೆ ಅವಕಾಶ ನೀಡದೆ ಶಾಂತಿಯುತ ಹಾಗೂ ನ್ಯಾಯಸಮ್ಮತವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಗರದ ಸುಮಾರು 40 ಪರೀಕ್ಷಾ ಕೇಂದ್ರಗಳಲ್ಲಿ ಬೆಳಗಿನ ಅವಧಿಯಲ್ಲಿ 15,702 ಹಾಗೂ ಮಧ್ಯಾಹ್ನದ ಅವಧಿಯಲ್ಲಿ 14,370 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ತಿಳಿಸಿದರು.

ಪರೀಕ್ಷೆಗೆ ಮುನ್ನ ಪರೀಕ್ಷಾ ಕೇಂದ್ರಗಳಲ್ಲಿನ ಗಾಳಿ-ಬೆಳಕು, ವಿದ್ಯುತ್, ಮೇಜು, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಪರಿಶೀಲಿಸಿ ಯಾವುದೇ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು. ಅಭ್ಯರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ಪರೀಕ್ಷೆ ಸುಸೂತ್ರವಾಗಿ ನಡೆಯಲು ಪ್ರತಿ ಕೇಂದ್ರಕ್ಕೆ ವೀಕ್ಷಕರು ಹಾಗೂ ಜಾಗೃತ ದಳದ ಸದಸ್ಯರನ್ನು ನಿಯೋಜಿಸಲಾಗಿದೆ. ಪ್ರಶ್ನೆಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳ ಸಾಗಾಟವನ್ನು ಬಿಗಿ ಭದ್ರತೆಯಲ್ಲಿ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್ ಸಾಧನಗಳಿಗೆ ನಿಷೇಧ :

ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್, ಬ್ಲೂಟೂತ್, ಮೈಕ್ರೋಚಿಪ್, ಗಡಿಯಾರ, ಇಯರ್‌ಫೋನ್, ಪೇಜರ್, ಕ್ಯಾಲ್ಕುಲೇಟರ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳು ಹಾಗೂ ಪಠ್ಯ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಿಸಿಟಿವಿ ಹಾಗೂ ವೆಬ್‌ಕಾಸ್ಟಿಂಗ್ ಕಣ್ಗಾವಲು :

ಪ್ರಶ್ನೆಪತ್ರಿಕೆ ತೆರೆಯುವ ಹಂತದಿಂದ ಪರೀಕ್ಷೆ ಮುಗಿಯುವವರೆಗೆ ಸಂಪೂರ್ಣ ಪ್ರಕ್ರಿಯೆ ಸಿಸಿಟಿವಿ ಕಣ್ಗಾವಲಿನಲ್ಲಿ ನಡೆಯಲಿದೆ. ವೆಬ್‌ಕಾಸ್ಟಿಂಗ್ ಮೂಲಕ ಸರ್ಕಾರವೂ ಪ್ರತಿ ಕೇಂದ್ರದ ಮೇಲೆ ನಿಗಾ ವಹಿಸಲಿದೆ. ಯಾವುದೇ ಅಕ್ರಮ ಅಥವಾ ಲೋಪ ಕಂಡುಬಂದರೆ ಸಂಬಂಧಿಸಿದ ಕೇಂದ್ರದ ಮುಖ್ಯಸ್ಥರೇ ಹೊಣೆಗಾರರಾಗಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ಅಕ್ರಮದಲ್ಲಿ ಭಾಗಿಯಾದರೆ ಕಠಿಣ ಶಿಕ್ಷೆ :

ನಗರ ಪೊಲೀಸ್ ಆಯುಕ್ತ ಡಾ. ಎಸ್.ಡಿ. ಶರಣಪ್ಪ ಮಾತನಾಡಿ, ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯದ ವಿಧಾನಗಳ ತಡೆಗಟ್ಟುವಿಕೆ) ಕಾಯ್ದೆ-2024ರಡಿ ಪರೀಕ್ಷೆಯಲ್ಲಿ ಅಕ್ರಮಕ್ಕೆ ಸಹಕಾರ ನೀಡಿದರೆ ಐದು ವರ್ಷಗಳವರೆಗೆ ಶಿಕ್ಷೆ ವಿಧಿಸುವ ಅವಕಾಶವಿದೆ. ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಗರಿಷ್ಠ 10 ವರ್ಷಗಳ ಶಿಕ್ಷೆ ವಿಧಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಹೇಳಿದರು.

ಅಭ್ಯರ್ಥಿಗಳಿಗೆ ಡ್ರೆಸ್ ಕೋಡ್ :

ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಮಾತನಾಡಿ, ಅಭ್ಯರ್ಥಿಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗದಂತೆ ಫ್ರಿಸ್ಕಿಂಗ್ ನಡೆಸಬೇಕು. ಎಐ ಆಧಾರಿತ ಮುಖ ಗುರುತಿನ ಪರಿಶೀಲನೆಯ ಬಳಿಕವೇ ಅಭ್ಯರ್ಥಿಗಳಿಗೆ ಪ್ರವೇಶ ನೀಡಲಾಗುವುದು ಎಂದರು.

ಅಭ್ಯರ್ಥಿಗಳು ಉದ್ದ ತೋಳಿನ ಉಡುಪು, ತಲೆ, ಕಿವಿ ಅಥವಾ ಮುಖ ಮುಚ್ಚುವ ಉಡುಪು ಧರಿಸಿ ಬರಬಾರದು. ಮೂಗುತಿ ಮತ್ತು ಮಂಗಳಸೂತ್ರ ಹೊರತುಪಡಿಸಿ ಯಾವುದೇ ಆಭರಣ ಅಥವಾ ಲೋಹದ ವಸ್ತುಗಳನ್ನು ಧರಿಸಲು ಅವಕಾಶವಿಲ್ಲ. ಶೂ ಧರಿಸುವಂತಿಲ್ಲ. ಕಡಿಮೆ ಹಿಮ್ಮಡಿಯ ಸ್ಯಾಂಡಲ್‌ಗಳನ್ನು ಮಾತ್ರ ಧರಿಸಬಹುದಾಗಿದ್ದು, ಪ್ರವೇಶ ಪತ್ರದಲ್ಲಿರುವ ಎಲ್ಲ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಎಸ್.ಪಿ. ಅಡ್ಡೂರು ಶ್ರೀನಿವಾಸುಲು, ಡಿ.ಸಿ.ಪಿ ಶಾಲು, ಶಾಲಾ ಶಿಕ್ಷಣ (ಪದವಿ ಪೂರ್ವ) ಉಪನಿರ್ದೇಶಕ ದೇವನಗೌಡ ಪಾಟೀಲ ಸೇರಿದಂತೆ ಪರೀಕ್ಷೆ ಕೇಂದ್ರದ ಮುಖ್ಯಸ್ಥರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News