ಸಿವಿಲ್ ಪೊಲೀಸ್ ಪರೀಕ್ಷೆ: ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳ ಸಮಯ ಬದಲಾವಣೆ
ಸಾಂದರ್ಭಿಕ ಚಿತ್ರ (AI)
ಕಲಬುರಗಿ : ಕಲ್ಯಾಣ ಕರ್ನಾಟಕ ವೃಂದದ ಸಿವಿಲ್ ಪೊಲೀಸ್ ಕಾನ್‍ಸ್ಟೇಬಲ್ ಹುದ್ದೆಗಳ ಭರ್ತಿಗೆ ಆ.2ರಂದು ನಡೆಯುವ ಲಿಖಿತ ಪರೀಕ್ಷೆಯ ಸಮಯವನ್ನು ಬದಲಾವಣೆ ಮಾಡಲಾಗಿದೆ ಎಂದು ಕೆಇಎ ತಿಳಿಸಿದೆ.
ಬುಧವಾರ ಈ ಕುರಿತು ಪ್ರಕಟನೆ ನೀಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ, ಈ ಮೊದಲು ನಿರ್ಧರಿಸಿದಂತೆ ಮಧ್ಯಾಹ್ನ 2:30ರ ಬದಲಿಗೆ ಸಂಜೆ 4ಗಂಟೆಗೆ ಪರೀಕ್ಷೆ ಆರಂಭವಾಗಲಿದೆ. ಕೆಲವು ಅಭ್ಯರ್ಥಿಗಳು, ಮಧ್ಯಾಹ್ನದ ಪರೀಕ್ಷಾ ಕೇಂದ್ರಗಳು ಬೆಳಗಿನ ಪರೀಕ್ಷಾ ಕೇಂದ್ರದಿಂದ ದೂರ ಇದ್ದು ತೆರಳುವುದಕ್ಕೆ ಕಷ್ಟ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಸಮಯ ಬದಲಾವಣೆ ಮಾಡಿದ್ದು, ಸಂಜೆ 4ರಿಂದ 5:30ರವರೆಗೆ ಪರೀಕ್ಷೆ ನಡೆಯಲಿದೆ.
ಉಳಿದಂತೆ ಬೆಳಗಿನ ಪರೀಕ್ಷೆಗಳು ನಿಗದಿಯಂತೆ ನಡೆಯಲಿವೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಅವರು ವಿವರಿಸಿದ್ದಾರೆ. ಸಿವಿಲ್ ಪೊಲೀಸ್ಕಾನ್‍ಸ್ಟೇಬಲ್ ನೇಮಕಾತಿ ಪರೀಕ್ಷೆ ಬರೆಯುತ್ತಿರುವ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ಎಲ್ಲ ಅಭ್ಯರ್ಥಿಗಳು ಹೊಸದಾಗಿ ಪ್ರವೇಶ ಪತ್ರ ಡೌನ್‍ಲೋಡ್ ಮಾಡಿಕೊಳ್ಳಬೇಕು. ಈ ಹಿಂದೆ ಡೌನ್‍ಲೋಡ್ ಮಾಡಿಕೊಂಡಿರುವವರು ಕೂಡ ಹೊಸದಾಗಿ ಡೌನ್‍ಲೋಡ್ ಮಾಡಿಕೊಳ್ಳಬೇಕು ಎಂದು ಪ್ರಸನ್ನ ಅವರು ಸಲಹೆ ನೀಡಿದ್ದಾರೆ.
ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ: ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ :
ಕರ್ನಾಟಕ ಸರಕಾರದ ಕಂದಾಯ ಇಲಾಖೆಯ ವಿವಿಧ ಜಿಲ್ಲೆಗಳಲ್ಲಿನ ಉಳಿಕೆ ಮೂಲ ವೃಂದ, ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದಲ್ಲಿ ಖಾಲಿಯಿರುವ ಗ್ರೂಪ್-ಸಿ ವೃಂದದ ಗ್ರಾಮ ಆಡಳಿತ ಅಧಿಕಾರಿ ನೇರ ನೇಮಕಾತಿಯ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಆ.7ರ ವರೆಗೆ ಹಾಗೂ ಆನ್‍ಲೈನ್ ಮೂಲಕ ಶುಲ್ಕ ಪಾವತಿಸಲು ಕೊನೆಯ ದಿನಾಂಕ ಆ.10ರ ವರೆಗೆ ವಿಸ್ತರಿಸಲಾಗಿದೆ. ಉಳಿದಂತೆ ಜು.10ರ ಅಧಿಸೂಚನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.