ಕಲಬುರಗಿಯ 3 ಲಕ್ಷಕ್ಕೂ ಅಧಿಕ ರೈತರಿಗೆ 464 ಕೋಟಿ ರೂ. ಬೆಳೆ ವಿಮೆ ಪರಿಹಾರ: ನಾಗೇಶ ಮುಚಖೇಡ ಹರ್ಷ

ಜಿಲ್ಲಾಡಳಿತ, ಕೃಷಿ ಇಲಾಖೆ, ಜನಪ್ರತಿನಿಧಿಗಳ ಕಾರ್ಯಕ್ಕೆ ಶ್ಲಾಘನೆ

Update: 2026-07-29 20:05 IST

ಕಲಬುರಗಿ: ಕಳೆದ ವರ್ಷದ ಅತಿವೃಷ್ಟಿಯಿಂದ ಬೆಳೆ ಹಾನಿಗೊಳಗಾಗಿ ಸಂಕಷ್ಟಕ್ಕೆ ಸಿಲುಕಿದ್ದ ಜಿಲ್ಲೆಯ 3 ಲಕ್ಷಕ್ಕೂ ಅಧಿಕ ರೈತರ ಖಾತೆಗಳಿಗೆ ಒಟ್ಟು 464 ಕೋಟಿ ರೂ. ಬೆಳೆ ವಿಮೆ ಪರಿಹಾರ ಜಮೆಯಾಗಿರುವುದಕ್ಕೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಸದಸ್ಯ ನಾಗೇಶ ಡಿ. ಮುಚಖೇಡ ಹರ್ಷ ವ್ಯಕ್ತಪಡಿಸಿದ್ದಾರೆ.

ಅತಿವೃಷ್ಟಿಯಿಂದ ಬೆಳೆ ಹಾನಿಯಾದ ತಕ್ಷಣ ಜಿಲ್ಲಾಡಳಿತ, ಕೃಷಿ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳು ತ್ವರಿತವಾಗಿ ಸಮಗ್ರ ಜಂಟಿ ಸರ್ವೇ ನಡೆಸಿ, ಬೆಳೆ ಹಾನಿಯ ನೈಜ ಪ್ರಮಾಣವನ್ನು ಗುರುತಿಸಿ ಸರ್ಕಾರಕ್ಕೆ ಸಮರ್ಪಕ ವರದಿ ಸಲ್ಲಿಸಿದ್ದರಿಂದ ರೈತರಿಗೆ ಬೆಳೆ ವಿಮೆ ಪರಿಹಾರ ದೊರೆಯಲು ಸಾಧ್ಯವಾಯಿತು ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಜಿಲ್ಲಾಡಳಿತದ ನಿರಂತರ ಪ್ರಯತ್ನದ ಫಲವಾಗಿ ಕಲಬುರಗಿ ಜಿಲ್ಲೆಗೆ ಒಟ್ಟು 464 ಕೋಟಿ ರೂ. ಬೆಳೆ ವಿಮೆ ಪರಿಹಾರ ಮಂಜೂರಾಗಿದೆ. ಇದರಲ್ಲಿ ಮೊದಲ ಕಂತಿನ 243.53 ಕೋಟಿ ರೂ. ಈಗಾಗಲೇ ರೈತರ ಖಾತೆಗಳಿಗೆ ಜಮೆಯಾಗಿದ್ದು, ಎರಡನೇ ಕಂತಿನ 221 ಕೋಟಿ ರೂ. ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆಯಾಗಿದೆ.

ಕಷ್ಟದ ಸಂದರ್ಭದಲ್ಲಿ ರೈತರ ಬೆನ್ನಿಗೆ ನಿಂತ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ನಾಗೇಶ ಡಿ. ಮುಚಖೇಡ ಶ್ಲಾಘಿಸಿದ್ದಾರೆ. ಜಿಲ್ಲೆಯ ಸಮಸ್ತ ರೈತರ ಪರವಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿರುವ ಅವರು, ಮುಂದೆಯೂ ರೈತಪರ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲಿ ಎಂದು ಆಶಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News