×
Ad

ಕಲಬುರಗಿ | ಒಳಮೀಸಲಾತಿಯ ವರ್ಗೀಕರಣ ದೋಷ ಮುಕ್ತಗೊಳಿಸಿ : ಗುಂಡಪ್ಪ ಸಿರಾಡೋಣ

Update: 2025-09-03 16:55 IST

ಕಲಬುರಗಿ: ಸೆ.4ರಂದು ನಡೆಯಲಿರುವ ಸಿದ್ಧರಾಮಯ್ಯ ಸರಕಾರದ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿಯ ವರ್ಗೀಕರಣ ಸೂತ್ರವನ್ನು ದೋಷಮುಕ್ತಗೊಳಿಸಬೇಕೆಂದು ಕರ್ನಾಟಕ ಮಾದಿಗ ಮತ್ತು ಉಪಜಾತಿಗಳ ಒಳಮೀಸಲಾತಿ ಒಕ್ಕೂಟದ ಕಲಬುರಗಿಯ ಮುಖಂಡ ಗುಂಡಪ್ಪ ಸಿರಾಡೋಣ ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರಕಾರ ತೆಗೆದುಕೊಂಡ 6, 6, 5-ಮೀಸಲಾತಿ ವರ್ಗೀಕರಣದ ಸೂತ್ರವು ಸುಪ್ರೀಂಕೋರ್ಟ್ ತೀರ್ಪಿನ ನಿರ್ದೇಶನಗಳನ್ನು ಪಾಲಿಸಿಲ್ಲ. ನಿಖರ ದತ್ತಾಂಶಗಳ ಆಧಾರದಲ್ಲಿ ವರ್ಗೀಕರಣ ಮಾಡಬೇಕು, ಅಂತರ ಹಿಂದುಳಿದಿರುವಿಕೆ ಆಧಾರದಲ್ಲಿ ವರ್ಗೀಕರಣ ಮಾಡಬೇಕು, ಸಮಾನರು - ಅಸಮಾನರು ಒಂದೇ ಪ್ರವರ್ಗದಲ್ಲಿ ಸೇರದಂತೆ ಎಚ್ಚರ ವಹಿಸಬೇಕು ಎಂದು ಹೇಳಿದೆ. ಆದರೆ, ಕಾಂಗ್ರೆಸ್ ಸರಕಾರ ಇದನ್ನು ಅಳವಡಿಸದೇ ದ್ರೋಹ ಬಗೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುಪ್ರೀಂಕೋರ್ಟ್ ತೀರ್ಪಿನ ಆಧಾರದಲ್ಲಿ ನ್ಯಾ.ನಾಗಮೋಹನ್ ದಾಸ್ ಅವರು ಸಮೀಕ್ಷೆಯ ದತ್ತಾಂಶಗಳನ್ನು ಬಳಸಿ ವರ್ಗೀಕರಣದ ಸೂತ್ರ ರೂಪಿಸಿದ್ದರು. ಆದರೆ, ಕಾಂಗ್ರೆಸ್ ಸರಕಾರದ ಸಚಿವ ಸಂಪುಟದ ನಿರ್ಣಯ ಒಳಮೀಸಲಾತಿ ಕುರಿತಾದ ಸುಪ್ರೀಂಕೋರ್ಟ್ ಆದೇಶದ ಮೂಲ ಆಶಯವನ್ನು ಮಣ್ಣುಪಾಲು ಮಾಡಿದೆ. ಸಚಿವ ಸಂಪುಟ ರಾಜಕೀಯ ಪ್ರೇರಿತ ನಿರ್ಧಾರ ಕೈಗೊಂಡಿದೆ. ಸಾಮಾಜಿಕ ನ್ಯಾಯದ ಆಶಯವನ್ನು ಮೂಲೆಗುಂಪು ಮಾಡಿದೆ. ಅತ್ಯಂತ ಹಿಂದುಳಿದ ಎಂದು ಗುರುತಿಸಲಾದ 59 ಸಣ್ಣ ಜಾತಿಗಳ ʼಎ' ಪ್ರವರ್ಗವನ್ನು ಅತಿ ಕಡಿಮೆ ಹಿಂದುಳಿದ ಡಿ . ಗುಂಪಿಗೆ ಸೇರಿಸಿರುವ ನಿರ್ಣಯದಲ್ಲಿ ಸುಪ್ರೀಂಕೋರ್ಟ್ ಆಶಯ ಕಣ್ಮರೆಯಾಗಿದೆ . ಅನ್ಯಾಯದಿಂದ ತತ್ತರಿಸುತ್ತಿರುವ 59 ಸಣ್ಣ ಜಾತಿಗಳಲ್ಲಿ ಮಾದಿಗ ಸಮುದಾಯದ 14 ಉಪಜಾತಿಗಳೂ ಸೇರಿವೆ. ರಾಜ್ಯ ಸರಕಾರ 59 ಸಣ್ಣ ಜಾತಿಗಳಿಗೆ ಪ್ರತ್ಯೇಕ ಶೇ.1ರಷ್ಟು ಮೀಸಲಾತಿ ಕೊಡಲೇಬೇಕು ಎಂದು ಆಗ್ರಹಿಸಿದರು.

ಮುಂಬರುವ ಸಂಪುಟ ಸಭೆಯಲ್ಲಿ 6, 6, 5 ರ ವರ್ಗೀಕರಣದ ಸೂತ್ರವನ್ನು ಮರು ಪರಿಶೀಲನೆ ಮಾಡಬೇಕು. ಎಲ್ಲ 101 ಪರಿಶಿಷ್ಟ ಜಾತಿಗಳಿಗೆ ನ್ಯಾಯ ಸಿಗಬೇಕು. ಸರ್ಕಾರ ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದರೆ ಮತ್ತೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಜು ನರೋಣ, ಬಸವರಾಜ ಅಟ್ಟೂರಕರ, ಗುರುನಾಥ್ ಉಪಳಾoವ, ಶಿವಶರಣಪ್ಪ ಸಾಗರ ಸೇರಿದಂತೆ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News