Kalaburagi | ವಿದ್ಯಾರ್ಥಿನಿಯರಿಗೆ ಉದ್ಯೋಗಾರ್ಹತಾ ಕೌಶಲ್ಯ ತರಬೇತಿ ಸಮಾರೋಪ
ಕಲಬುರಗಿ: ವಿದ್ಯಾರ್ಥಿನಿಯರಲ್ಲಿ ಉದ್ಯೋಗಾರ್ಹತೆ, ವೃತ್ತಿಪರ ಕೌಶಲ್ಯ ಹಾಗೂ ಆತ್ಮವಿಶ್ವಾಸ ಬೆಳೆಸುವ ಉದ್ದೇಶದಿಂದ ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಇನ್ಫೋಸಿಸ್ ಫೌಂಡೇಶನ್ ಮತ್ತು ಐಸಿಟಿ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದ್ದ 15 ದಿನಗಳ ಉದ್ಯೋಗಾರ್ಹತಾ ಕೌಶಲ್ಯ ತರಬೇತಿ ಕಾರ್ಯಕ್ರಮ ನ. 7ರಂದು ಸಮಾರೋಪಗೊಂಡಿತು.
‘ಫಿನಿಶಿಂಗ್ ಸ್ಕೂಲ್ ಫಾರ್ ಎಂಪ್ಲಾಯಬಿಲಿಟಿ–ಫೇಸ್ III’ ಯೋಜನೆಯಡಿ ಅ. 22ರಿಂದ ನ. 7ರವರೆಗೆ ನಡೆದ ತರಬೇತಿಯಲ್ಲಿ ಅಂತಿಮ ವರ್ಷದ ಬಿ.ಎ. ಮತ್ತು ಬಿ.ಕಾಂ. ವಿಭಾಗಗಳ 65 ವಿದ್ಯಾರ್ಥಿನಿಯರು ಭಾಗವಹಿಸಿ ತರಬೇತಿ ಪಡೆದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಪವನ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಪಡೆಯಲು ಶೈಕ್ಷಣಿಕ ಅರ್ಹತೆಯೊಂದೇ ಸಾಲದು. ಸಂವಹನ ಕೌಶಲ್ಯ, ಆತ್ಮವಿಶ್ವಾಸ, ವ್ಯಕ್ತಿತ್ವ ವಿಕಸನ ಹಾಗೂ ಜೀವನ ಕೌಶಲ್ಯಗಳೂ ಅಗತ್ಯವಾಗಿವೆ. ಇಂತಹ ತರಬೇತಿಗಳು ವಿದ್ಯಾರ್ಥಿನಿಯರ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಸಹಕಾರಿಯಾಗುತ್ತವೆ ಎಂದರು.
ತರಬೇತುದಾರೆ ಸ್ನೇಹಾ ಕಲಾಲ್ ಮಾತನಾಡಿ, ವಿದ್ಯಾರ್ಥಿನಿಯರು ತರಬೇತಿಯಲ್ಲಿ ಕಲಿತ ಕೌಶಲ್ಯಗಳನ್ನು ಶೈಕ್ಷಣಿಕ ಹಾಗೂ ವೃತ್ತಿಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ನ್ಯಾಕ್ ಸಂಯೋಜಕ ಡಾ. ಮೋಹನರಾಜ್ ಪತ್ತಾರ್ ಮಾತನಾಡಿ, ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳ ಸದುಪಯೋಗ ಪಡೆದು ವಿದ್ಯಾರ್ಥಿನಿಯರು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕೋರ್ಸ್ ಸಂಯೋಜಕಿ ಶ್ವೇತಾ ಕೋಟೆ, ಐಕ್ಯೂಎಸಿ ಸಂಯೋಜಕ ಡಾ. ಶಿವರಾಜ್ ಗೌನಳ್ಳಿ, ಡಾ. ನಾಗರತ್ನ, ಡಾ. ಕನ್ಯಾಕುಮಾರಿ ವಿ., ಶಿವಲೀಲಾ ದೊತ್ರೆ, ಡಾ. ಶ್ರೀದೇವಿ ಸರಡಗಿ, ಗೀತಾ ಪಾಟೀಲ ಹಾಗೂ ಕವಿತಾ ಎ. ಉಪಸ್ಥಿತರಿದ್ದರು. ದಿವ್ಯಾ ವಂದಿಸಿದರು. ಶೆರಿಲ್ ನಿರೂಪಿಸಿದರು.