Kalaburagi | ಕೆಬಿಎನ್ ಗೋಲ್ಡ್ ಕಪ್ ಫುಟ್ಬಾಲ್ ಟೂರ್ನಿಗೆ ರಾಷ್ಟ್ರೀಯ ಮಟ್ಟದ ಮನ್ನಣೆ: ಡಾ.ಸೈಯದ್ ಮುಹಮ್ಮದ್ ಅಲಿ ಅಲ್ ಹುಸೇನಿ
ಕೆಬಿಎನ್ ಗೋಲ್ಡ್ ಕಪ್ ಫುಟ್ಬಾಲ್: ಬೆಂಗಳೂರು ಮಾತೃ ಪ್ರತಿಷ್ಠಾನ ತಂಡಕ್ಕೆ ಪ್ರಶಸ್ತಿ
ಕಲಬುರಗಿ : ದಿವಂಗತ ಹಜರತ್ ಡಾ.ಸೈಯದ್ ಶಾ ಗೆಸು ದರಾಜ್ ಖುಸ್ರೋ ಹುಸೇನಿ ಅವರು ಕ್ರೀಡಾ ಕ್ಷೇತ್ರದಲ್ಲಿ ಹೊಂದಿದ್ದ ದೂರದೃಷ್ಟಿ ಹಾಗೂ ಪರಿಶ್ರಮದ ಫಲವಾಗಿ ಕೆಬಿಎನ್ ಹೌಸ್ ಆಫ್ ಸ್ಪೋರ್ಟ್ಸ್ ಆಯೋಜಿಸುತ್ತಿರುವ ಕ್ರೀಡಾಕೂಟಗಳು ಇಂದು ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿವೆ ಎಂದು ಖ್ವಾಜಾ ಎಜುಕೇಶನ್ ಸೊಸೈಟಿ ಅಧ್ಯಕ್ಷ ಹಾಗೂ ಕೆಬಿಎನ್ ವಿಶ್ವವಿದ್ಯಾಲಯದ ಕುಲಪತಿ ಡಾ. ಸೈಯದ್ ಮುಹಮ್ಮದ್ ಅಲಿ ಅಲ್ ಹುಸೇನಿ ಹೇಳಿದರು.
ನಗರದಲ್ಲಿ ನಡೆದ ಕೆಬಿಎನ್ ಗೋಲ್ಡ್ ಕಪ್ ಫುಟ್ಬಾಲ್ ಟೂರ್ನಮೆಂಟ್ನ ಫೈನಲ್ ಪಂದ್ಯದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, 2012ರಲ್ಲಿ ತಮ್ಮ ತಂದೆಯವರ ಆಶಯದಂತೆ ಈ ಟೂರ್ನಮೆಂಟ್ ಆರಂಭಿಸಲಾಗಿತ್ತು. ವಿವಿಧ ರಾಜ್ಯಗಳ ಯುವ ಆಟಗಾರರು, ತಂಡಗಳು ಹಾಗೂ ಫುಟ್ಬಾಲ್ ಅಕಾಡೆಮಿಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆ ಕಲ್ಪಿಸುವುದು ಇದರ ಉದ್ದೇಶವಾಗಿತ್ತು. ನಿರಂತರ ಪರಿಶ್ರಮ ಮತ್ತು ಯೋಜಿತ ಪ್ರಯತ್ನಗಳ ಫಲವಾಗಿ ಟೂರ್ನಮೆಂಟ್ ರಾಷ್ಟ್ರೀಯ ಮಟ್ಟದ ಮನ್ನಣೆ ಗಳಿಸಿದೆ ಎಂದರು.
ಕ್ರೀಡೆಯು ದೈಹಿಕ ಮತ್ತು ಮಾನಸಿಕ ಸದೃಢತೆಯ ಜತೆಗೆ ಆತ್ಮವಿಶ್ವಾಸ, ಪರಿಶ್ರಮ, ಶಿಸ್ತು ಹಾಗೂ ಪರಸ್ಪರ ಗೌರವದ ಮನೋಭಾವವನ್ನು ಬೆಳೆಸುತ್ತದೆ. ಗೆಲುವಿನ ಉತ್ಸಾಹದಷ್ಟೇ ಎದುರಾಳಿ ತಂಡದ ಆಟಗಾರರನ್ನು ಗೌರವಿಸುವ ಕ್ರೀಡಾಸ್ಫೂರ್ತಿಯೂ ಮುಖ್ಯ. ಉತ್ತಮ ಪ್ರದರ್ಶನ ನೀಡುವ ಆಟಗಾರರಿಂದ ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಫೈನಲ್ನಲ್ಲಿ ವಿಜೇತವಾದ ಬೆಂಗಳೂರು ಮಾತೃ ಪ್ರತಿಷ್ಠಾನ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಅವರು, ರನ್ನರ್ ಅಪ್ ಸ್ಥಾನ ಪಡೆದ ಗೋವಾದ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ತಂಡದ ಪ್ರದರ್ಶನವನ್ನೂ ಶ್ಲಾಘಿಸಿದರು. ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಎನ್.ಎ. ಹ್ಯಾರಿಸ್, ಕಾರ್ಯದರ್ಶಿ, ರೆಫರಿಗಳು, ಅಧಿಕಾರಿಗಳು, ತರಬೇತುದಾರರು ಹಾಗೂ ತಂಡಗಳ ವ್ಯವಸ್ಥಾಪಕರಿಗೆ ಕೃತಜ್ಞತೆ ಸಲ್ಲಿಸಿದರು. ಎಲ್ಲ ತಂಡಗಳು ವಯೋಮಿತಿ ಸೇರಿದಂತೆ ಕ್ರೀಡಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು.
ಖ್ವಾಜಾ ಎಜುಕೇಶನ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಪ್ರೊ. ಎ.ಎಂ. ಪಠಾಣ್ ಮಾತನಾಡಿ, ದಿವಂಗತ ಸಜ್ಜಾದಾ ನಶೀನ್ ಅವರ ಕ್ರೀಡಾ ಕ್ಷೇತ್ರದ ದೂರದೃಷ್ಟಿಯನ್ನು ಸ್ಮರಿಸಿದರು. ಕೆಬಿಎನ್ ವಿವಿಯ ಪ್ರೊ-ವೈಸ್ ಚಾನ್ಸಲರ್ ಪ್ರೊ. ಅಶ್ಫಾಕ್ ಅಹ್ಮದ್ ಸ್ವಾಗತಿಸಿದರು. ಕುಲಸಚಿವ ಮೀರ ವಿಲಾಯತ ಅಲಿ ವಂದಿಸಿದರು.
ಹಜರತ್ ಕ್ಯಾಂಪಸ್ ನಿರ್ದೇಶಕ ಡಾ. ಸೈಯದ್ ಮುಸ್ತಫಾ ಅಲ್ ಹುಸೇನಿ, ಕೆಇಎಸ್ ಪ್ರಧಾನ ಕಾರ್ಯದರ್ಶಿ ಬೆನ್ನಿ ಕೊರಿಯಾಕೋಸ್, ಡಾ. ಫಿರೋಜ್, ಐಕ್ಯೂಎಸಿ ನಿರ್ದೇಶಕ ಡಾ. ಅಬ್ದುಲ್ ಬಶೀರ್, ಹಬೀಬ್ ಮೌಜಂ, ಸೈಯದ್ ಮಜರ್ ಹುಸೇನ್, ಮೌಲ್ವಿ ಅಬ್ದುಲ್ ವಾಹಿದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.