ಕಲಬುರಗಿ: ಜಿಲ್ಲೆಯಲ್ಲಿ ಕಬ್ಬಿಗೆ ನ್ಯಾಯಯುತ ದರ ನಿಗದಿಪಡಿಸುವ ಸಂಬಂಧ ಜಿಲ್ಲಾಡಳಿತದ ನೇತೃತ್ವದಲ್ಲಿ ರೈತರು ಹಾಗೂ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳೊಂದಿಗೆ ನಡೆದ ಎರಡನೇ ಸುತ್ತಿನ ಸಭೆಯೂ ಯಾವುದೇ ಅಂತಿಮ ತೀರ್ಮಾನವಿಲ್ಲದೆ ಅಂತ್ಯಗೊಂಡಿದೆ.

ರೈತರ ಹಿತದೃಷ್ಟಿಯಿಂದ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳು ಶೀಘ್ರವೇ ಆಂತರಿಕ ಚರ್ಚೆ ನಡೆಸಿ, ಸೂಕ್ತ ಬೆಲೆ ನಿಗದಿಯ ಪ್ರಸ್ತಾವನೆಯೊಂದಿಗೆ ಮುಂದಿನ ಸಭೆಗೆ ಬರಬೇಕು ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಸ್ಪಷ್ಟ ಸೂಚನೆ ನೀಡಿದ್ದಾರೆ.

ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸುದೀರ್ಘ ಸಭೆಯಲ್ಲಿ ಜಿಲ್ಲೆಯ ಐದೂ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು, ರೈತ ಸಂಘಟನೆಗಳ ಮುಖಂಡರು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಸಭೆಯಲ್ಲಿ ರೈತರ ಪರವಾಗಿ ಜಿಲ್ಲಾಧಿಕಾರಿಗಳು ಹಾಗೂ ರೈತ ಮುಖಂಡರು ಧ್ವನಿ ಎತ್ತಿ, ಪ್ರಸಕ್ತ ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ ಕನಿಷ್ಠ 3,600 ರೂ. ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು. ಬರಗಾಲ ಹಾಗೂ ಇಳುವರಿ ಕುಸಿತದಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದು, ಬೆಳಗಾವಿ ಭಾಗದ ಮಾದರಿಯಲ್ಲೇ ಕಲಬುರಗಿಯಲ್ಲೂ ಕಬ್ಬಿಗೆ ಬೆಲೆ ನೀಡಬೇಕು ಎಂದು ಆಗ್ರಹಿಸಿದರು.

ಆದರೆ, ಮಾರುಕಟ್ಟೆ ಪರಿಸ್ಥಿತಿ ಹಾಗೂ ಸಕ್ಕರೆ ರಿಕವರಿ ಪ್ರಮಾಣದಲ್ಲಿನ ವ್ಯತ್ಯಾಸವನ್ನು ಮುಂದಿಟ್ಟ ಕಾರ್ಖಾನೆಗಳ ಆಡಳಿತ ಮಂಡಳಿಯ ಪ್ರತಿನಿಧಿಗಳು, ಪ್ರತಿ ಟನ್‌ಗೆ 3,200 ರೂ. ಕ್ಕಿಂತ ಹೆಚ್ಚಿನ ದರ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ರಿಕವರಿ ವ್ಯತ್ಯಾಸದ ಲೆಕ್ಕಾಚಾರಗಳನ್ನು ಮುಂದಿಟ್ಟ ಕಾರ್ಖಾನೆಗಳ ನಿಲುವಿಗೆ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕಬ್ಬಿನ ಬೆಲೆ ಅಂತಿಮವಾಗುವವರೆಗೆ ಕಾರ್ಖಾನೆಗಳ ಕಾರ್ಯಾರಂಭಕ್ಕೆ ಅವಕಾಶ ನೀಡುವುದಿಲ್ಲ ಎಂದು ರೈತ ಮುಖಂಡರು ಎಚ್ಚರಿಸಿದರು.

ರೈತರ ಪ್ರಮುಖ ಬೇಡಿಕೆಗಳು :

ಬೆಳಗಾವಿ ಜಿಲ್ಲೆಯಲ್ಲಿ ನಿಗದಿಪಡಿಸಿರುವ ಬೆಲೆಯನ್ನೇ ಕಲಬುರಗಿ ಭಾಗದ ರೈತರಿಗೂ ಅನ್ವಯಿಸುವ ಮೂಲಕ ಏಕರೂಪದ ದರ ನಿಗದಿಪಡಿಸಬೇಕು ಎಂದು ರೈತರು ಒತ್ತಾಯಿಸಿದರು. ತೂಕದಲ್ಲಿ ನಡೆಯುವ ಅಕ್ರಮಗಳನ್ನು ತಡೆಯಲು ಸರ್ಕಾರವೇ 500 ಕೋಟಿ ರೂ. ಮೀಸಲಿಟ್ಟು, ಕಾರ್ಖಾನೆಗಳ ಮಾರ್ಗದಲ್ಲಿ ಅಧಿಕೃತ ವೇಬ್ರಿಡ್ಜ್‌ಗಳನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದರು. 2004-06ರ ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ತಕ್ಷಣ ಜಾರಿಗೆ ತರಬೇಕು ಹಾಗೂ ರೈತರ ಒಪ್ಪಿಗೆಯಿಲ್ಲದೆ ಯಾವುದೇ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭಿಸಲು ಅವಕಾಶ ನೀಡಬಾರದು ಎಂದು ಬೇಡಿಕೆ ಸಲ್ಲಿಸಿದರು.

ಸಭೆಯಲ್ಲಿ ರೈತರ ಆತಂಕಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು, ಒಣಗುತ್ತಿರುವ ಕಬ್ಬಿನ ನಿರ್ವಹಣೆಗೆ ಪರ್ಯಾಯ ಮಾರ್ಗಗಳನ್ನು ಹುಡುಕುವುದಾಗಿ ತಿಳಿಸಿದರು. ಅಲ್ಲದೆ, ನೆರೆಹೊರೆಯ ಜಿಲ್ಲೆಗಳಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿ ಶೀಘ್ರವೇ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ ಸಂಕನೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಡಿಸಿಪಿ ಶಾಲು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ರೈತ ಮುಖಂಡರಾದ ರಮೇಶ ಹೂಗಾರ, ಶರಣಬಸಪ್ಪ ಮಮಶೆಟ್ಟಿ, ಧರ್ಮರಾಜ ಸಾಹು, ಶ್ರೀಮಂತ ಬಿರಾದಾರ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor