Kalaburagi | ಗುತ್ತಿಗೆ ಆಧಾರದ ಆಯುಷ್ ವೈದ್ಯರನ್ನು ತಕ್ಷಣ ಕಾಯಂಗೊಳಿಸಲು ಆಗ್ರಹ
RBSK ವೈದ್ಯರನ್ನು ಸೇವೆಯಿಂದ ಬಿಡುಗಡೆಗೊಳಿಸುವ ನಿರ್ಧಾರ ಕೈಬಿಡಲು ಒತ್ತಾಯ
ಕಲಬುರಗಿ : ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಮತ್ತು ರಾಷ್ಟ್ರೀಯ ಆಯುಷ್ ಅಭಿಯಾನ (NAM) ಅಡಿಯಲ್ಲಿ ಕಳೆದ 10ರಿಂದ 15 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಆಯುಷ್ ವೈದ್ಯರನ್ನು ತಕ್ಷಣ ಕಾಯಂಗೊಳಿಸಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ (WPI) ಕರ್ನಾಟಕ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಬೀನ್ ಅಹಮದ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಜಂಟಿ ಮಾಧ್ಯಮ ಪ್ರಕಟಣೆ ನೀಡಿರುವ ಅವರು, 2007-08ರಿಂದ ರಾಜ್ಯದ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನೂರಾರು ಆಯುಷ್ ವೈದ್ಯರು ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದಾರೆ. ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದರೂ ಅವರಿಗೆ ಉದ್ಯೋಗ ಭದ್ರತೆ ಕಲ್ಪಿಸದಿರುವುದು ಅನ್ಯಾಯವಾಗಿದೆ. ಈ ಸಂಬಂಧ ಹೈಕೋರ್ಟ್ ನಿರ್ದೇಶನಗಳಿದ್ದರೂ ಸರ್ಕಾರ ಕ್ರಮ ಕೈಗೊಳ್ಳಲು ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ (RBSK) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಯುಷ್ ವೈದ್ಯರನ್ನು ಬಿಡುಗಡೆಗೊಳಿಸಿ, ಅವರ ಸ್ಥಾನಕ್ಕೆ ಎಂಬಿಬಿಎಸ್ ವೈದ್ಯರನ್ನು ನೇಮಿಸುವ ಸರ್ಕಾರದ ಕ್ರಮವನ್ನು ಕೈಬಿಡಬೇಕು. ಇದರಿಂದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವೈದ್ಯರು ಉದ್ಯೋಗ ಕಳೆದುಕೊಳ್ಳುವ ಆತಂಕ ಎದುರಿಸುವಂತಾಗಿದೆ ಎಂದು ಹೇಳಿದ್ದಾರೆ.
ಡಾ. ಮಧುಕರ್ ಬಿ.ಎಸ್. ವಿರುದ್ಧ ಕೇಂದ್ರ ಸರ್ಕಾರ ಹಾಗೂ ಡಾ. ಶಿವಾಲಿಂಗಪ್ಪ ವಿರುದ್ಧ ಕರ್ನಾಟಕ ಸರ್ಕಾರದ ಪ್ರಕರಣಗಳಲ್ಲಿ ಹೈಕೋರ್ಟ್ ನೀಡಿರುವ ನಿರ್ದೇಶನಗಳಂತೆ, 10 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಗುತ್ತಿಗೆ ವೈದ್ಯರನ್ನು ಕಾಯಂಗೊಳಿಸಲು ಸೂಕ್ತ ನೀತಿ ರೂಪಿಸಬೇಕು. ಅಲ್ಲದೆ, ಖಾಯಂ ವೈದ್ಯರಿಗೆ ಸಮಾನವಾಗಿ ವೇತನ ಶ್ರೇಣಿ ಹಾಗೂ ಇತರ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಸರ್ಕಾರ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಅಥವಾ ವಿಶೇಷ ನಿಯಮಾವಳಿ ರೂಪಿಸುವ ಮೂಲಕ ಬಾಕಿ ಇರುವ ಗುತ್ತಿಗೆ ಹುದ್ದೆಗಳನ್ನು ಕಾಯಂಗೊಳಿಸಬೇಕು. ಇಲ್ಲದಿದ್ದರೆ ಸಂತ್ರಸ್ತ ವೈದ್ಯರ ಪರವಾಗಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಮುಬೀನ್ ಅಹಮದ್ ಎಚ್ಚರಿಸಿದ್ದಾರೆ.