Kalaburagi | ಆಯುರ್ವೇದ–ನ್ಯಾಚುರೋಪತಿ ತರಬೇತಿ ಶಿಬಿರಕ್ಕೆ ಚಾಲನೆ

Update: 2026-08-05 19:58 IST

ಕಲಬುರಗಿ : ನಗರದ ಶ್ರೀನಿವಾಸ್ ಸರಡಗಿ ರಸ್ತೆಯ ವಿಮಾನ ನಿಲ್ದಾಣ ಸಮೀಪದ ಅರುಜೀವ ಆಯುರ್ವೇದ ಆಸ್ಪತ್ರೆಯಲ್ಲಿ ಘಾನಾ ದೇಶದ 17 ವಿದ್ಯಾರ್ಥಿಗಳಿಗಾಗಿ ಒಂದು ತಿಂಗಳ ಅವಧಿಯ ನ್ಯಾಚುರೋಪತಿ ಹಾಗೂ ಆಯುರ್ವೇದ ತರಬೇತಿ ಶಿಬಿರಕ್ಕೆ ಬುಧವಾರ ಅಧಿಕೃತ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಕಲಬುರಗಿ ಮಹಾಪೌರ ವರ್ಷಾ ಆರ್. ಜಾನೆ ಉದ್ಘಾಟಿಸಿದರು. ಘಾನಾ ದೇಶದ ಪ್ರೊಫೆಸರ್ ನ್ಯಾರಕೋಟಿ ರೆಫೆಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರುಜೀವ ಆಯುರ್ವೇದ ಆಸ್ಪತ್ರೆಯ ಅಧ್ಯಕ್ಷ ಡಾ. ಪಿ.ಎಸ್. ಶಂಕರ್ ವಹಿಸಿದ್ದರು. ಆಸ್ಪತ್ರೆಯ ಸಿಇಒ ಡಾ. ಕೌಸ್ತುಬ್ ಧುಮಾಲ್ ಉಪಸ್ಥಿತರಿದ್ದರು.

ಪ್ರೊ. ನ್ಯಾರಕೋಟಿ ರೆಫೆಲ್ ಮಾತನಾಡಿ, ಕ್ಯೂಎಐ–7101 ಮಾನ್ಯತೆ ಪಡೆದ ಭಾರತದ ಏಕೈಕ ಆಯುರ್ವೇದ ಆಸ್ಪತ್ರೆಯಾಗಿರುವ ಅರುಜೀವ ಆಸ್ಪತ್ರೆಯ ಗುಣಮಟ್ಟದ ಚಿಕಿತ್ಸೆ ಹಾಗೂ ತರಬೇತಿ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಘಾನಾದ ವಿಶ್ವವಿದ್ಯಾಲಯದ 17 ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಅರುಜೀವ ಆಸ್ಪತ್ರೆಯ ಸುಸಜ್ಜಿತ ಮೂಲಸೌಕರ್ಯ, ಆಧುನಿಕ ಚಿಕಿತ್ಸಾ ವ್ಯವಸ್ಥೆ ಮತ್ತು ಸಿಬ್ಬಂದಿಯ ವೃತ್ತಿಪರ ಸೇವೆಯಿಂದ ಪ್ರೇರಿತರಾಗಿ ಘಾನಾ ರಾಜಧಾನಿ ಅಕ್ರಾದಲ್ಲಿ 50 ಎಕರೆ ಪ್ರದೇಶದಲ್ಲಿ ನ್ಯಾಚುರೋಪತಿ ಆಸ್ಪತ್ರೆ ಸ್ಥಾಪಿಸುವ ಯೋಜನೆಯನ್ನೂ ರೂಪಿಸಲಾಗಿದೆ ಎಂದು ಅವರು ತಿಳಿಸಿದರು.

ಅಧ್ಯಕ್ಷೀಯ ಭಾಷಣದಲ್ಲಿ ಡಾ. ಪಿ.ಎಸ್.ಶಂಕರ್ ಮಾತನಾಡಿ, ಅರುಜೀವ ಆಸ್ಪತ್ರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸುತ್ತಿದ್ದು, ಕಲಬುರಗಿಯ ಹೆಸರನ್ನು ಜಾಗತಿಕ ಆರೋಗ್ಯ ಕ್ಷೇತ್ರದಲ್ಲಿ ಗುರುತಿಸುವ ಕೆಲಸ ಮಾಡುತ್ತಿದೆ. ದೇಶದ ವಿವಿಧ ರಾಜ್ಯಗಳು ಹಾಗೂ ವಿದೇಶಗಳಿಂದ ರೋಗಿಗಳು ಚಿಕಿತ್ಸೆಗೆ ಆಗಮಿಸುತ್ತಿರುವುದು ಆಸ್ಪತ್ರೆಯ ಸೇವಾ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ, ಗಣ್ಯರು ಹಾಗೂ ಘಾನಾ ದೇಶದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಡಾ. ಶಲಿನ್ ಭಾರತಿ ನಿರೂಪಿಸಿದ್ದು, ಕೊನೆಯಲ್ಲಿ ಸಿಇಒ ಡಾ. ಕೌಸ್ತುಬ್ ಧುಮಾಲ್ ವಂದನಾರ್ಪಣೆ ಸಲ್ಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News