Kalaburagi | ಜಗತ್ತಿನ ಜ್ಞಾನದ ಬೆಳಕು ಡಾ.ಬಿ.ಆರ್.ಅಂಬೇಡ್ಕರ್: ಪ್ರೊ.ಶಶಿಕಾಂತ್ ಎಸ್.ಉಡಿಕೇರಿ
ಕಲಬುರಗಿ : ಡಾ.ಬಿ.ಆರ್.ಅಂಬೇಡ್ಕರ್ ಅವರು ಜಗತ್ತಿನ ಜ್ಞಾನದ ಬೆಳಕಾಗಿದ್ದು, ಅವರ ವಿಚಾರಧಾರೆ ಮತ್ತು ಜ್ಞಾನದಿಂದ ಸಮಾಜದ ಅನೇಕ ತಲೆಮಾರುಗಳು ಪ್ರೇರಣೆ ಪಡೆದಿವೆ. ಅವರ ಕರ್ನಾಟಕದೊಂದಿಗೆ ಹೊಂದಿದ್ದ ಐತಿಹಾಸಿಕ ನಂಟನ್ನು ಅರಿಯಲು “ಕರ್ನಾಟಕದಲ್ಲಿ ಡಾ. ಬಿ.ಆರ್. ಅಂಬೇಡ್ಕರರ ಹೆಜ್ಜೆಗಳು” ವಿಶೇಷ ಉಪನ್ಯಾಸ ಮಹತ್ವದ ವೇದಿಕೆಯಾಗಿದೆ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ್ ಎಸ್. ಉಡಿಕೇರಿ ಹೇಳಿದರು.
ಗುಲ್ಬರ್ಗಾ ವಿಶ್ವವಿದ್ಯಾಲಯದ ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆ ಹಾಗೂ ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಹರಿಹರ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ “ಕರ್ನಾಟಕದಲ್ಲಿ ಡಾ. ಬಿ.ಆರ್. ಅಂಬೇಡ್ಕರರ ಹೆಜ್ಜೆಗಳು” ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವಜ್ಞಾನಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ, ಚಿಂತನೆ ಮತ್ತು ಕರ್ನಾಟಕದೊಂದಿಗಿನ ಐತಿಹಾಸಿಕ ಸಂಬಂಧವನ್ನು ಪರಿಚಯಿಸುವ ಕಾರ್ಯಕ್ರಮ ಆಯೋಜಿಸಿರುವ ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಅವರ ಕಾರ್ಯವನ್ನು ಅವರು ಶ್ಲಾಘಿಸಿದರು.
ವಿಶೇಷ ಉಪನ್ಯಾಸ ನೀಡಿದ ಸಹಕಾರ ಇಲಾಖೆಯ ನಿವೃತ್ತ ಉಪನಿರ್ದೇಶಕ ಹಾಗೂ ವಿಜಯಪುರದ ಹಲಸಂಗಿ ಮಧುರಚೆನ್ನ ಗೆಳೆಯರ ಬಳಗದ ಬಿ.ಆರ್. ಬನಸೋಡೆ ಅವರು, 1936ರ ಸುಮಾರಿಗೆ ವಿಜಯಪುರಕ್ಕೆ ಆಗಮಿಸಿದ್ದ ಡಾ. ಅಂಬೇಡ್ಕರ್ ಅವರನ್ನು ತಮ್ಮ ತಾತ ಶಿವಪ್ಪ ಕಾಂಬಳೆ ಅವರು ನದಿ ದಾಟುವ ವೇಳೆ ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದ ಐತಿಹಾಸಿಕ ಘಟನೆಯನ್ನು ಸ್ಮರಿಸಿದರು. ಅಂಬೇಡ್ಕರ್ ಅವರ ಕರ್ನಾಟಕ ಪ್ರವಾಸದ ಕುರಿತು ಅಧ್ಯಯನ ನಡೆಸಿ ಪುಸ್ತಕ ಪ್ರಕಟಿಸಿದ್ದು, ಸಂಗ್ರಹಿಸಿದ ದಾಖಲೆಗಳನ್ನು ಜಿಲ್ಲಾಡಳಿತಕ್ಕೂ ಸಲ್ಲಿಸಿರುವುದಾಗಿ ತಿಳಿಸಿದರು.
ಸಿಂಡಿಕೇಟ್ ಸದಸ್ಯ ಎಸ್.ಪಿ. ಸುಳ್ಳದ್ ಮಾತನಾಡಿ, ಪ್ರೊ. ಎಚ್.ಟಿ. ಪೋತೆ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಶಿಬಿರಗಳು, ವಿಚಾರ ಸಂಕಿರಣಗಳು ಹಾಗೂ ವಿಶೇಷ ಉಪನ್ಯಾಸಗಳು ವಿದ್ಯಾರ್ಥಿಗಳಲ್ಲಿ ಶಿಕ್ಷಣ, ಸಾಹಿತ್ಯ ಮತ್ತು ವೈಚಾರಿಕ ಅರಿವು ಮೂಡಿಸುತ್ತಿವೆ ಎಂದು ಹೇಳಿದರು.
ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಮಾತನಾಡಿ, ಡಾ. ಅಂಬೇಡ್ಕರ್ ಅವರು ಬೆಳಗಾವಿ, ಚಿಕ್ಕೋಡಿ, ನಿಪ್ಪಾಣಿ ಸೇರಿದಂತೆ ಕರ್ನಾಟಕದ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಸಾಮಾಜಿಕ ಜಾಗೃತಿ ಮತ್ತು ಸಮಾನತೆಯ ಸಂದೇಶ ಸಾರಿದ್ದಾರೆ ಎಂದು ಹೇಳಿದರು.
ನಿಪ್ಪಾಣಿಯಲ್ಲಿ ಚನ್ನಬಸಪ್ಪ ಕರಾಳೆ ಅವರ ಕುದುರೆಯ ಮೇಲೆ ಅಂಬೇಡ್ಕರ್ ಕುಳಿತಿದ್ದ ಪ್ರಸಿದ್ಧ ಛಾಯಾಚಿತ್ರದ ಹಿನ್ನೆಲೆ ಹಾಗೂ ಮಹ್ಮದ್ ಪಟೇಲರ ಮನೆಯಲ್ಲಿ ಆತಿಥ್ಯ ಸ್ವೀಕರಿಸಿದ ಸಂದರ್ಭದಲ್ಲಿ ಅಲ್ಲಿನ ಬಾಲಕಿಗೆ “ಮುನ್ನಿ” ಎಂದು ಹೆಸರಿಟ್ಟ ಘಟನೆಯನ್ನು ಅವರು ವಿವರಿಸಿದರು.
ಅಂಬೇಡ್ಕರ್ ಅವರ ಕರ್ನಾಟಕ ಪ್ರವಾಸದ ಇತಿಹಾಸವನ್ನು ಯುವಜನತೆ ಆಳವಾಗಿ ಅಧ್ಯಯನ ಮಾಡಬೇಕಿದ್ದು, ಶರಣ-ಸಂತರ ಚಿಂತನೆಗಳೊಂದಿಗೆ ಅವರ ವಿಚಾರಗಳನ್ನು ಅರ್ಥೈಸಿಕೊಂಡಾಗ ಮಾತ್ರ ಸಮಾಜಮುಖಿ ಭವಿಷ್ಯ ನಿರ್ಮಾಣ ಸಾಧ್ಯ ಎಂದು ಪ್ರೊ. ಪೋತೆ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಡಾ. ರೆಹಮಾನ್ ಪಟೇಲ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾವಿಷಯಕ ಪರಿಷತ್ ಸದಸ್ಯ ಡಾ. ದಶರಥ ನಾಯಕ, ಸಂದರ್ಶಕ ಪ್ರಾಧ್ಯಾಪಕ ಡಾ. ಸೂರ್ಯಕಾಂತ ಸುಜ್ಯಾತ, ಅತಿಥಿ ಉಪನ್ಯಾಸಕರು, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಸಂಗೀತ ವಿಭಾಗದ ಉಪನ್ಯಾಸಕ ಸಿದ್ಧಾರ್ಥ ಚಿಮ್ಮಾ ಇದ್ಲಾಯಿ ಬುದ್ಧ ವಂದನೆ ಗೀತೆ ಹಾಡಿದರು. ಡಾ. ಶಂಭುನಾಥ ನಡಗೇರಿ ಸ್ವಾಗತಿಸಿದರು. ಡಾ. ಸಂದೀಪ ಹೋಳ್ಕರ್ ವಂದಿಸಿದರು. ಡಾ. ಕಿರಣ್ ವಲ್ಲೇಪುರೆ ಕಾರ್ಯಕ್ರಮ ನಿರೂಪಿಸಿದರು.