Kalaburagi | ಬೆಳೆ ವಿಮೆಯಿಂದ ವಂಚಿತ ರೈತರ ಪರ ಶಾಸಕರು ಮೌನ ಏಕೆ?: ಹರ್ಷಾ ಗುತ್ತೇದಾರ ಪ್ರಶ್ನೆ
ಕಲಬುರಗಿ, ಆ.5: ಬೆಳೆ ವಿಮೆ ಮಂಜೂರಾದಾಗ ಅದರ ಶ್ರೇಯಸ್ಸನ್ನು ಪಡೆದುಕೊಂಡಿದ್ದ ಆಳಂದ ಕ್ಷೇತ್ರದ ಶಾಸಕ ಬಿ.ಆರ್. ಪಾಟೀಲ ಅವರು, ಈಗ ಸಾವಿರಾರು ರೈತರು ಬೆಳೆ ವಿಮೆ ಯೋಜನೆಯಿಂದ ವಂಚಿತರಾಗಿರುವ ಕುರಿತು ಮೌನ ವಹಿಸಿರುವುದು ಏಕೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹರ್ಷಾ ಗುತ್ತೇದಾರ ಪ್ರಶ್ನಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬೆಳೆ ವಿಮೆ ಮಂಜೂರಾದ ಸಂದರ್ಭದಲ್ಲಿ “ನನ್ನ ಪ್ರಯತ್ನದಿಂದಲೇ ರೈತರಿಗೆ ಬೆಳೆ ವಿಮೆ ದೊರೆತಿದೆ” ಎಂದು ಹೇಳಿಕೊಂಡು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳನ್ನು ಕರೆಸಿ ಸಾರ್ವಜನಿಕ ಸನ್ಮಾನ ಮಾಡಿಸಿಕೊಂಡಿದ್ದ ಶಾಸಕರು, ಇದೀಗ ರೈತರು ಸಂಕಷ್ಟದಲ್ಲಿದ್ದರೂ ಸರ್ಕಾರದ ಗಮನ ಸೆಳೆಯುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಆಳಂದ ತಾಲೂಕಿನ ಹಲವು ಗ್ರಾಮಗಳ ರೈತರು ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರೂ ಅಥವಾ ಅರ್ಹತೆ ಹೊಂದಿದ್ದರೂ ತಾಂತ್ರಿಕ ಹಾಗೂ ಆಡಳಿತಾತ್ಮಕ ಕಾರಣಗಳಿಂದ ಬೆಳೆ ವಿಮೆ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ. ಬರ ಹಾಗೂ ಬೆಳೆ ನಷ್ಟದಿಂದ ಈಗಾಗಲೇ ಸಂಕಷ್ಟದಲ್ಲಿರುವ ರೈತರು ಇದರಿಂದ ಮತ್ತಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ರೈತರ ಸಮಸ್ಯೆಗಳ ಕುರಿತು ನಿರಂತರವಾಗಿ ಧ್ವನಿ ಎತ್ತಬೇಕಾದ ಜನಪ್ರತಿನಿಧಿಗಳು ಇಂತಹ ಗಂಭೀರ ವಿಷಯದಲ್ಲಿ ಮೌನ ವಹಿಸಿರುವುದು ಬೇಸರದ ಸಂಗತಿಯಾಗಿದೆ. ಬೆಳೆ ವಿಮೆಯಿಂದ ವಂಚಿತರಾದ ಪ್ರತಿಯೊಬ್ಬ ಅರ್ಹ ರೈತನಿಗೂ ನ್ಯಾಯ ದೊರಕುವಂತೆ ಸರ್ಕಾರದ ಮೇಲೆ ಒತ್ತಡ ಹೇರಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆಗೆ ತಕ್ಷಣ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಸರ್ಕಾರವು ಬೆಳೆ ವಿಮೆಯಿಂದ ವಂಚಿತರಾದ ರೈತರ ಅರ್ಜಿಗಳನ್ನು ಮರುಪರಿಶೀಲಿಸಿ, ಅರ್ಹ ಎಲ್ಲ ರೈತರಿಗೆ ಶೀಘ್ರ ವಿಮೆ ಪರಿಹಾರ ಬಿಡುಗಡೆ ಮಾಡಬೇಕು. ಜೊತೆಗೆ ಶಾಸಕ ಬಿ.ಆರ್. ಪಾಟೀಲ ಅವರು ತಮ್ಮ ನಿಲುವನ್ನು ಸಾರ್ವಜನಿಕರ ಮುಂದೆ ಸ್ಪಷ್ಟಪಡಿಸಿ, ರೈತರ ಹಿತಾಸಕ್ತಿಗಾಗಿ ತಕ್ಷಣ ಕ್ರಮ ಕೈಗೊಳ್ಳಬೇಕು. ಈ ಕುರಿತು ಆಳಂದ ಮಂಡಲ ಬಿಜೆಪಿ ವತಿಯಿಂದ ಶೀಘ್ರದಲ್ಲೇ ಹೋರಾಟ ನಡೆಸಲಾಗುವುದು ಎಂದು ಹರ್ಷಾ ಗುತ್ತೇದಾರ ತಿಳಿಸಿದ್ದಾರೆ.