×
Ad

ಕಲಬುರಗಿ: ಕೃಷಿ ಬಿಕ್ಕಟ್ಟು, ನಕಲಿ ಬೀಜ–ರಸಗೊಬ್ಬರ ಹಾವಳಿ ವಿರುದ್ಧ ಸಿಪಿಐ–ಎಐಕೆಎಸ್ ಜಂಟಿ ಪ್ರತಿಭಟನೆಗೆ ನಿರ್ಧಾರ

Update: 2026-05-26 23:50 IST

ಕಲಬುರಗಿ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ನಕಲಿ ಬೀಜ ಹಾಗೂ ರಸಗೊಬ್ಬರಗಳ ಹಾವಳಿ ಮತ್ತು ಕಾಳಸಂತೆ ಮಾರಾಟವನ್ನು ವಿರೋಧಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ಹಾಗೂ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಜಂಟಿಯಾಗಿ ಇದೇ 30ರಂದು ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.

ಅಂದು ನಗರದ ಜಗತ್ ಪ್ರದೇಶದಿಂದ ಜಂಟಿ ಕೃಷಿ ನಿರ್ದೇಶಕರ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ನೂರಾರು ರೈತರು, ರೈತ ಮುಖಂಡರು ಭಾಗವಹಿಸಲಿದ್ದಾರೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಡಾ. ಮಹೇಶಕುಮಾರ ರಾಠೋಡ, ಎಐಕೆಎಸ್ ರಾಜ್ಯ ಕಾರ್ಯಾಧ್ಯಕ್ಷ ಮೌಲಾ ಮುಲ್ಲಾ ಹಾಗೂ ಜಿಲ್ಲಾಧ್ಯಕ್ಷ ಭೀಮಾಶಂಕರ ಮಾಡಿಯಾಳ ಅವರು ಮಂಗಳವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ ರಸಗೊಬ್ಬರ ಹಾಗೂ ಬೀಜಗಳ ಕೃತಕ ಅಭಾವ ಸೃಷ್ಟಿಸಿ ಕೆಲ ವ್ಯಾಪಾರಿಗಳು ಅತಿರೇಕದ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ಆರೋಪಿಸಿದ ಅವರು, ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ ಇಂತಹ ಕಾಳಸಂತೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಣ್ಣ ಹಾಗೂ ಬಡ ರೈತರಿಗೆ ಅನುಕೂಲವಾಗುವಂತೆ ರಸಗೊಬ್ಬರ ವಿತರಣೆಯನ್ನು ಪಡಿತರ ಮಾದರಿಯಲ್ಲಿ ರೈತ ಸಂಪರ್ಕ ಕೇಂದ್ರಗಳ ಮೂಲಕವೇ ನಡೆಸಬೇಕು ಎಂದು ಒತ್ತಾಯಿಸಿದ ಅವರು, ಜೊತೆಗೆ ನಕಲಿ ಬೀಜ ಮತ್ತು ರಸಗೊಬ್ಬರ ಮಾರಾಟ ಜಾಲವನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ದೇಶದ ಉತ್ಪಾದನಾ ವಲಯ ಹಾಗೂ ಎಂಎಸ್‌ಎಂಇಗಳಿಗೆ ನೇರ ಹಣಕಾಸು ನೆರವು ನೀಡುವುದು, ಕೃಷಿ ಆಧಾರಿತ ಗ್ರಾಮೀಣ ಕೈಗಾರಿಕೆಗಳನ್ನು ಉತ್ತೇಜಿಸುವುದು, ಶಿಕ್ಷಣ, ಆರೋಗ್ಯ, ಸಾರ್ವಜನಿಕ ಬ್ಯಾಂಕುಗಳು ಹಾಗೂ ವಿಮಾ ಕ್ಷೇತ್ರಗಳನ್ನು ಬಲಪಡಿಸುವುದು ಹಾಗೂ ಉದ್ಯೋಗ ಸೃಷ್ಟಿ ಮೂಲಕ ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸುದ್ದಿಗೋಷ್ಠಿಯಲ್ಲಿ ಪ್ರಭುದೇವ ಯಳಸಂಗಿ, ಮಹಮ್ಮದ್ ಚೌದರಿ, ಸಾಜೀದ್ ಅಹಮದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News