ವಾಡಿ: ಶಾಂತಿ ಸೌಹಾರ್ದತೆಗೆ ಸಹಕರಿಸಲು ಡಿವೈಎಸ್ಪಿ ಕರೆ
ವಾಡಿ: ಪ್ರತಿ ಹಬ್ಬವನ್ನು ಶಾಂತಿ ಸುವ್ಯವಸ್ಥೆ ಮತ್ತು ಭ್ರಾತೃತ್ವದಿಂದ ಆಚರಿಸಲು ಹಾಗೂ ಸಹೋದರತೆ ಸಂದೇಶ ಸಾರಲು ಎಲ್ಲರೂ ಮುಂದೆ ಬರಬೇಕು. ಇದರ ವಿರುದ್ಧ ನಡೆಯುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ ಎಚ್ಚರಿಕೆ ನೀಡಿದರು.
ವಾಡಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಮೇ. 28ರಂದು ನಡೆಯಲಿದ್ದು ಯಾವುದೇ ಅಹಿತಕರ ಘಟನೆ ಸಂಭವಿಸಿದರೂ ಪೊಲೀಸ್ ಇಲಾಖೆ ಅಂತವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸುತ್ತದೆ ಎಂದರು.
ಅಕ್ರಮ ಸಾಗಾಣಿಕೆ ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು. ಸಾಮಾಜಿಕ ಸೌಹಾರ್ದತೆ ಉಳಿಸಲು ಪೊಲೀಸ್ ಇಲಾಖೆ ನಿರಂತರ ಶ್ರಮಿಸುತ್ತಿದೆ. ಇಲಾಖೆ ಸಹ ಎಲ್ಲೆಡೆ ಹದ್ದಿನ ಕಣ್ಣು ನೆಟ್ಟಿದ್ದು ನಿಮ್ಮ ಒಂದು ಸಣ್ಣ ಕಿಡಿಗೇಡಿ ಕೃತ್ಯ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುತ್ತದೆ. ಇಂತಹ ಸಮಯದಲ್ಲಿ ಪೊಲೀಸರು ಮಧ್ಯೆ ಪ್ರವೇಶಿಸಿ ಅಂತವರ ವಿರುದ್ಧ ಕ್ರಮ ಜರುಗಿಸುತ್ತದೆ ಎಂದು ಕಿವಿಮಾತು ಹೇಳಿದರು.
ತಹಶೀಲ್ದಾರ ನಾಗಯ್ಯ ಹಿರೇಮಠ ಮಾತನಾಡಿ, ಯಾವುದನ್ನು ಪರೀಕ್ಷೆ ಮಾಡದೇ ಎಲ್ಲವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುವ ಚಾಳಿ ಇತ್ತೀಚಿಗೆ ಹೆಚ್ಚಾಗುತ್ತಿದೆ. ಘಟನೆ ಜರುಗಿದಾಗ ಅದರ ಸತ್ಯಾಸತ್ಯತೆ ಮತ್ತು ನೈಜತೆ ನೋಡಿ ಹಂಚಬೇಕು. ಸುಳ್ಳು ಇದ್ದರೆ ಕ್ರಮ ಜರುಗಿಸುವ ಕಾನೂನು ಬಂದಿದ್ದು ಇದು ಸಹ ಸಾಮಾಜಿಕ ಜಾಲತಾಣ ಬಳಸುವವರ ಗಮನಕ್ಕೆ ಇರಬೇಕು ಎಂದು ಕಿವಿ ಮಾತು ಹೇಳಿದರು.
ಮುಸ್ಲಿಂ ಸಮಾಜದ ಮುಖಂಡ ಸೈಯ್ಯದ್ ಬಾಬುಮಿಯ್ಯ ಮಾತನಾಡಿ, ಮೇ 28ರಂದು ಬಕ್ರೀದ್ ಹಬ್ಬ ಆಚರಣೆ ಮಾಡುತ್ತಿದ್ದು ಸಮಾಜದ ಎಲ್ಲಾ ಜಾತಿಯ ಎಲ್ಲಾ ಧರ್ಮದ ಜನರನ್ನು ಒಳಗೊಂಡು ಆಚರಣೆ ಮಾಡುತ್ತಿದ್ದು ಸೌಹಾರ್ದತೆಗೆ ಈ ಹಬ್ಬ ನಾಂದಿ ಹಾಡುತ್ತಿದೆ ಎಂದರು.
ಸಿಪಿಐ ಸಿದ್ದಬಸವನಗೌಡ,ಪಿಎಸ್ಐ ತಿರುಮಲೇಶ ಕುಂಬಾರ, ಪಶು ಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಶಂಕರ ಕಣ್ಣಿ, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಸೂರ್ಯಕಾಂತ ರದ್ದೇವಾಡಿ, ಶರಣಬಸ್ಸು ಶಿರೂರುಕರ ಮಾತನಾಡಿದರು.
ಅಪರಾಧ ವಿಭಾಗದ ಪಿಎಸ್ಐ ರೇಣುಕಾ ಉಡಗಿ, ಬಷೀರ್ ಖುರೇಶಿ, ಶರಣು ನಾಟೆಕಾರ, ಮಹ್ಮದ್ ಗೌಸ್, ಸೂರ್ಯಕಾಂತ ರದ್ದೇವಾಡಿ, ಹರಿ ಗಲಾಂಡೆ, ರವಿ ಕಾರಬಾರಿ, ಶ್ರಾವಣಕುಮಾರ ಮೊಸಲಗಿ, ಮಲ್ಲಯ್ಯ ಗುತ್ತೇದಾರ, ನಾಗೇಂದ್ರ ಜೈಗಂಗಾ, ಸಿದ್ದು ಪೂಜಾರಿ, ಕಿಶಾನ ಜಾಧವ ಹಾಗೂ ಇನ್ನಿತರರು ಇದ್ದರು.