ಕಲಬುರಗಿ | ಅತಿವೃಷ್ಟಿಯಿಂದ ಬೆಳೆ ಹಾನಿ: ಹೆಚ್ಚುವರಿ ಪರಿಹಾರಕ್ಕೆ ಬಿಜೆಪಿ ಮುಖಂಡರಿಂದ ಆಗ್ರಹ
ಕಲಬುರಗಿ: 2025-26ನೇ ಸಾಲಿನಲ್ಲಿ ಮುಂಗಾರು ಅತೀ ವೃಷ್ಟಿ ಮಳೆಯಿಂದಾಗಿ ನಷ್ಟಕ್ಕೊಳಗಾದ ರೈತರು ಬೆಳೆದ ಏಕದಳ, ದ್ವಿದಳ ಹಾಗೂ ತೋಟಗಾರಿಕಾ ಬೆಳೆಗಳಿಗೆ ಎಸ್‌ಡಿಆರ್‌ಆಫ್ ಅಥವಾ ಎನ್‌ಡಿಆರ್‌ಎಫ್ ನಿಯಮಕ್ಕೆ ಅನುಸಾರವಾಗಿ ಹಾಗೂ ರಾಜ್ಯ ಸರಕಾರದಿಂದ ಹೆಚ್ಚುವರಿಯಾಗಿ ಕೂಡಲೇ ಪರಿಹಾರ ಬಿಡುಗಡೆಗೊಳಿಸಬೇಕೆಂದು ಬಿಜೆಪಿ ಮುಖಂಡರು ಆಗ್ರಹಿಸಿದರು.
ಗುರುವಾರ ಆಳಂದ ಪಟ್ಟಣದ ಬಸ್ ನಿಲ್ದಾಣದ ಎದುರುಗಡೆ ಆಳಂದ ಮಂಡಲ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ಮುಖಂಡರು, ಈಗ ಬಿಡುಗಡೆ ಮಾಡಿರುವ ಪರಿಹಾರವೂ ಯಾವುದಕ್ಕೂ ಸಾಲುವುದಿಲ್ಲ. ಇದು ಕೇವಲ ರೈತರ ಕಣ್ಣೊರೆಸುವ ತಂತ್ರವಾಗಿದೆ. ಕರ್ನಾಟಕ ರಾಜ್ಯದಲ್ಲಿ ರೈತರು ಬೆಳೆದ ಬೆಳೆಗಳಾದ ಮೆಕ್ಕೆಜೋಳ, ಭತ್ತ, ರಾಗಿ, ತೊಗರಿ, ಈರುಳ್ಳಿ ಸೇರಿದಂತೆ ಏಕದಳ ಹಾಗೂ ದ್ವಿದಳ ಧಾನ್ಯಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಪ್ರತಿ ಗ್ರಾಮ ಪಂಚಾಯತ್‌ಗೆ ಒಂದರಂತೆ ಅಥವಾ ಪ್ರತಿ ಸಹಕಾರಿ ಸಂಘಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲು ಒತ್ತಾಯಿಸಿದರು.
ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ ಮಾತನಾಡಿ, 2025-26ನೇ ಸಾಲಿನ ಬೆಂಬಲ ಬೆಲೆಯಲ್ಲಿ ರೈತರು ಬೆಳೆದಿರುವ ಬೆಳೆಗಳನ್ನು ರಾಜ್ಯ ಸರಕಾರ ಖರೀದಿ ಕೇಂದ್ರಗಳ ಮುಖಾಂತರ ಖರೀದಿಸಲು ಆಗ್ರಹಿಸಿದರು.
ಸೇಡಂ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ ಮಾತನಾಡಿ, ಕಲ್ಯಾಣ ಕರ್ನಾಟಕ ಜೀವನಾಡಿಯಾದ ತುಂಗಭದ್ರಾ ಆಣೆಕಟ್ಟಿನಲ್ಲಿ 2ನೇ ಬೆಳೆಗೆ ನೀರು ಬಿಡುವಷ್ಟು ನೀರಿನ ಸಂಗ್ರಹವಿದ್ದು, ಹೆಚ್ಚು ಮಳೆಯಿಂದಾಗಿ ಒಳಹರಿವು ಕೂಡ ನಿರಂತರವಾಗಿ ಹರಿಯುತ್ತಿದ್ದರೂ ರಾಜ್ಯ ಕಾಂಗ್ರೆಸ್ ಸರಕಾರ 2ನೇ ಬೆಳೆಗೆ ನೀರು ಬಿಡಲು ಸಾಧ್ಯವಿಲ್ಲವೆಂದು ತೀರ್ಮಾನಿಸಿರುತ್ತದೆ. ಕ್ರಸ್ಟ್ ಗೇಟ್‌ಗಳ ರಿಪೇರಿಗಾಗಿ ಎರಡನೇ ಬೆಳೆಗೆ ನೀರು ನಿಲ್ಲಿಸಿರುವ ಕಾಂಗ್ರೆಸ್ ಸರಕಾರ ನಷ್ಟಕ್ಕೊಳಗಾಗುವ ರೈತರಿಗೆ ಪ್ರತಿ ಎಕರೆ ಭೂಮಿಗೆ 25 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ ಮಾತನಾಡಿ, ಕೃಷ್ಣಾ ಮೇಲ್ದಂಡೆ ಯೋಜನೆ, ಮಹಾದಾಯಿ ಯೋಜನೆ, ಕಳಸಾ ಬಂಡೂರಿ, ಅಪ್ಪಭದ್ರಾ ಮೇಲ್ದಂಡೆ ಯೋಜನೆ, ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಮುತ್ತು ಕಾಲುವೆ, ಟನಲ್‌ಗಳು ಹಾಗೂ ಅಶ್ವೇಡೆಟ್‌ಗಳ ರಿಪೇರಿ, ಮೇಕೆದಾಟು ಹಾಗೂ ಎತ್ತಿನಹೊಳೆ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲು ಕಾಂಗ್ರೆಸ್ ಸರಕಾರ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಪ್ರತಿವರ್ಷ 30 ಸಾವಿರ ಕೋಟಿ ಹಣ ಬಿಡುಗಡೆಗೊಳಿಸಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಆಗ್ರಹಿಸಿದರು.
ಪ್ರತಿಭಟನೆ ನಂತರ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ವೀರಣ್ಣಾ ಮಂಗಾಣೆ, ಅಣ್ಣಾರಾವ ಪಾಟೀಲ ಕವಲಗಾ, ಸಂತೋಷ ಹಾದಿಮನಿ, ಲಿಂಗರಾಜ ಬಿರಾದಾರ, ಬಸವರಾಜ ಬಿರಾದಾರ, ಚಂದ್ರಕಾoತ ಭೂಸನೂರ, ಮಲ್ಲಿಕಾರ್ಜುನ ತಡಕಲ, ಪಂಡಿತರಾವ್ ಪಾಟೀಲ, ಆದಿನಾಥ ಹೀರಾ, ನಾಗರಾಜ ಶೇಗಜಿ, ಫಯ್ಯಾಜ್ ಪಟೇಲ, ಶರಣು ಸರಸಂಬಿ, ಸಂದೀಪ ನಾಯಕ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.