Kalaburagi | ಇಂಡಿಯಾ ಟುಡೇ ಶ್ರೇಯಾಂಕದಲ್ಲಿ ಸಿಯುಕೆಗೆ 36ನೇ ಸ್ಥಾನ
ಕಲಬುರಗಿ: ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯ (ಸಿಯುಕೆ) ಪ್ರತಿಷ್ಠಿತ ಇಂಡಿಯಾ ಟುಡೇ ಶ್ರೇಯಾಂಕ–2026ರ ಸರ್ಕಾರಿ ವಿಶ್ವವಿದ್ಯಾಲಯಗಳ ವಿಭಾಗದಲ್ಲಿ 36ನೇ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದೆ.
ಕಳೆದ ಮೂರು ವರ್ಷಗಳಲ್ಲಿ ವಿಶ್ವವಿದ್ಯಾಲಯವು ಶ್ರೇಯಾಂಕದಲ್ಲಿ ಸ್ಥಿರವಾದ ಪ್ರಗತಿ ದಾಖಲಿಸಿದೆ. 2024ರಲ್ಲಿ 38ನೇ ಸ್ಥಾನ, 2025ರಲ್ಲಿ 39ನೇ ಸ್ಥಾನ ಪಡೆದಿದ್ದ ಸಿಯುಕೆ, ಇದೀಗ 2026ರಲ್ಲಿ 36ನೇ ಸ್ಥಾನಕ್ಕೆ ಏರಿಕೆ ಕಂಡಿದೆ.
ಇಂಡಿಯಾ ಟುಡೇ ಗ್ರೂಪ್ ನಡೆಸುವ ವಾರ್ಷಿಕ ಉನ್ನತ ಶಿಕ್ಷಣ ಸಮೀಕ್ಷೆಯಲ್ಲಿ ದೇಶದ ವಿಶ್ವವಿದ್ಯಾಲಯಗಳ ಕಾರ್ಯಕ್ಷಮತೆಯನ್ನು ವಿವಿಧ ಪ್ರಮುಖ ಮಾನದಂಡಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ. ವಿಶ್ವವಿದ್ಯಾಲಯದ ಪ್ರತಿಷ್ಠೆ ಮತ್ತು ಆಡಳಿತ, ಶೈಕ್ಷಣಿಕ ಹಾಗೂ ಸಂಶೋಧನಾ ಶ್ರೇಷ್ಠತೆ, ಮೂಲಸೌಕರ್ಯ, ವ್ಯಕ್ತಿತ್ವ ಮತ್ತು ನಾಯಕತ್ವ ವಿಕಸನ, ವೃತ್ತಿ ಪ್ರಗತಿ ಹಾಗೂ ಉದ್ಯೋಗಾವಕಾಶಗಳು ಸೇರಿದಂತೆ ವಿವಿಧ ಮಾನದಂಡಗಳನ್ನು ಪರಿಗಣಿಸಿ ಶ್ರೇಯಾಂಕ ನೀಡಲಾಗುತ್ತದೆ.
ಸಿಯುಕೆಯ ಸುಧಾರಿತ ಶ್ರೇಯಾಂಕವು ಶೈಕ್ಷಣಿಕ ಗುಣಮಟ್ಟ, ಸಂಶೋಧನೆ, ನಾವೀನ್ಯತೆ, ಮೂಲಸೌಕರ್ಯ ಅಭಿವೃದ್ಧಿ, ವಿದ್ಯಾರ್ಥಿ ಕೇಂದ್ರಿತ ಕಾರ್ಯಕ್ರಮಗಳು ಹಾಗೂ ಸಾಂಸ್ಥಿಕ ಬೆಳವಣಿಗೆಗೆ ವಿಶ್ವವಿದ್ಯಾಲಯ ನೀಡುತ್ತಿರುವ ನಿರಂತರ ಆದ್ಯತೆಯನ್ನು ಪ್ರತಿಬಿಂಬಿಸುತ್ತದೆ.
ಈ ಕುರಿತು ಸಂತಸ ವ್ಯಕ್ತಪಡಿಸಿದ ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ, ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಹಾಗೂ ಎಲ್ಲ ಪಾಲುದಾರರನ್ನು ಅಭಿನಂದಿಸಿದರು.
ದೇಶದ ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳ ಪೈಕಿ ಸಿಯುಕೆಯ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯವು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರೊ. ಬಟ್ಟು ಸತ್ಯನಾರಾಯಣ ತಿಳಿಸಿದರು.