ಕಲಬುರಗಿ: ಪುಸ್ತಕಗಳು ಜ್ಞಾನ, ಅನುಭವ ಹಾಗೂ ಜೀವನದ ಮಾರ್ಗದರ್ಶಕಗಳಾಗಿವೆ. ಒಂದು ಉತ್ತಮ ಪುಸ್ತಕ ನೆಮ್ಮದಿಯ ಬದುಕಿಗೆ ಬೆಳಕಾಗಿದೆ ಎಂದು ಕಲಬುರಗಿ ರಂಗಾಯಣದ ಮಾಜಿ ನಿರ್ದೇಶಕ ಪ್ರಭಾಕರ ಜೋಶಿ ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಹಾಗೂ ಜಿಲ್ಲಾ ಜಾಗೃತಿ ಸಮಿತಿ, ಕಲಬುರಗಿ ಸಂಯುಕ್ತ ಆಶ್ರಯದಲ್ಲಿ ನಗರದ ಮಹಾಲಕ್ಷ್ಮೀ ಲೇಔಟ್‌ನ ಹಿರಿಯ ಸಾಹಿತಿ ನರಸಿಂಗರಾವ್ ಹೇಮನೂರ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದ ‘ಮನೆಗೊಂದು ಗ್ರಂಥಾಲಯ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ಪುಸ್ತಕ ಪ್ರಾಧಿಕಾರ ‘ಮನೆಗೊಂದು ಗ್ರಂಥಾಲಯ’ ಎಂಬ ಉತ್ತಮ ಯೋಜನೆ ರೂಪಿಸಿಕೊಂಡು ಪ್ರತಿಯೊಬ್ಬರ ಮನೆಯಲ್ಲಿ ಗ್ರಂಥಾಲಯ ಇರುವಂತೆ ಮಾಡುತ್ತಿರುವುದು ಶ್ಲಾಘನೀಯ. ಇಂದಿನ ವಿದ್ಯಾರ್ಥಿಗಳು ಮೊಬೈಲ್‌ಗೆ ಹೆಚ್ಚು ಅವಲಂಬಿತರಾಗಿದ್ದು, ಅವರಲ್ಲಿ ಪುಸ್ತಕ ಓದುವ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ಪ್ರಾಧಿಕಾರ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದು ಜೋಶಿ ಹೇಳಿದರು.

ಕಾರ್ಯಕ್ರಮದ ಆಶಯ ನುಡಿಗಳನ್ನಾಡಿದ ರಾಜ್ಯ ಸದಸ್ಯ ಬಿ.ಎಚ್. ನೀರಗುಡಿ, ಪುಸ್ತಕ ಪ್ರಾಧಿಕಾರದಿಂದ ಪುಸ್ತಕ ಪ್ರದರ್ಶನ, ವಿಚಾರ ಸಂಕಿರಣ, ‘ಅಂಗಳದಲ್ಲಿ ತಿಂಗಳ ಪುಸ್ತಕ’ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಭಾಗದ ಸಾಹಿತಿಗಳ ಸಂಪುಟಗಳನ್ನು ಹೊರತರುವುದರ ಜತೆಗೆ ಶಾಲಾ-ಕಾಲೇಜುಗಳಲ್ಲಿ ‘ನನ್ನ ನೆಚ್ಚಿನ ಪುಸ್ತಕ’, ಪ್ರಬಂಧ ಸ್ಪರ್ಧೆ ಹಾಗೂ ರಸಪ್ರಶ್ನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಈ ಭಾಗದ ಶಾಲಾ-ಕಾಲೇಜುಗಳಿಗೆ ಉಚಿತವಾಗಿ ಪುಸ್ತಕಗಳನ್ನು ನೀಡುವುದು, ಮನೆ ಮನೆಗಳಲ್ಲಿ ಗ್ರಂಥಾಲಯ ಅನುಷ್ಠಾನಗೊಳಿಸುವುದು ಹಾಗೂ ಗ್ರಂಥಾಲಯ ನಿರ್ಮಿಸಿದವರನ್ನು ಪ್ರಾಧಿಕಾರದ ವತಿಯಿಂದ ಅಭಿನಂದನಾ ಪತ್ರ ನೀಡಿ ಗೌರವಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿರಿಯ ಸಾಹಿತಿ ಡಾ. ವಿಜಯಕುಮಾರ್ ಪರುತೆ ಮಾತನಾಡಿ, ಮನೆ ಮನೆಗಳಲ್ಲಿ ಗ್ರಂಥಾಲಯ ನಿರ್ಮಾಣವಾಗಬೇಕು. ಪುಸ್ತಕಗಳ ಓದಿನಿಂದ ಮನುಷ್ಯನ ಜ್ಞಾನ ವೃದ್ಧಿಯಾಗುತ್ತದೆ ಎಂದು ಹೇಳಿದರು.

ಮನೆಯಲ್ಲಿ ಗ್ರಂಥಾಲಯ ನಿರ್ಮಿಸಿರುವ ಹಿರಿಯ ಸಾಹಿತಿ ನರಸಿಂಗರಾವ್ ಹೇಮನೂರ ಮಾತನಾಡಿ, ಸಾಹಿತ್ಯಕ್ಕೆ ಸಂಬಂಧಿಸಿದ ಸಾವಿರಾರು ಪುಸ್ತಕಗಳನ್ನು ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ಓದಲು ನೀಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಗ್ರಂಥಾಲಯವನ್ನು ಮನೆಯಲ್ಲಿ ನಿರ್ಮಿಸುವ ಯೋಜನೆ ಹೊಂದಿದ್ದು, ಪುಸ್ತಕಗಳು ವಿದ್ಯಾರ್ಥಿಗಳಿಗೆ ಉಪಯೋಗವಾಗಬೇಕು ಎಂಬ ಮನೋಭಾವನೆ ಹೊಂದಿದ್ದೇನೆ ಎಂದು ಹೇಳಿದರು.

ಜಿಲ್ಲಾ ಜಾಗೃತಿ ಸಮಿತಿಯ ಸಂಚಾಲಕರಾದ ಡಾ. ಶೋಭಾದೇವಿ ಚೆಕ್ಕಿ ಕಾರ್ಯಕ್ರಮ ನಿರ್ವಹಿಸಿದರು. ಜಾಗೃತ ಸಮಿತಿ ಸದಸ್ಯ ಡಾ.ಪರ್ವೀನ್ ಸುಲ್ತಾನಾ , ರೇವಣಸಿದ್ದಪ್ಪ ದುಕಾನ, ಶ್ರೀಶೈಲ ಮದಾನೆ, ವಿಜಯಕುಮಾರ್ ರೋಣದ ಇದ್ದರು.ಸುರೇಶ ಪತ್ತಾರ, ಚಂದ್ರಕಾಂತ ಅಡ್ವೊಕೇಟ್, ಶುಭಾ, ರಾಜೇಶ್,ಸಾವಿತ್ರಿ, ಸುನೀತಾ ಮುಂತಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor