Kalaburagi | ಸೆ. 3 ರಂದು ರಫ್ತು ಪ್ರೋತ್ಸಾಹನ ಕಾರ್ಯಾಗಾರ
ಕಲಬುರಗಿ: ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆ, ಉತ್ತರ ವಲಯ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಸಂಭಾವ್ಯ ಜವಳಿ ರಫ್ತು ಉದ್ದಿಮೆದಾರರಿಗಾಗಿ ಒಂದು ದಿನದ ‘ರಫ್ತು ಪ್ರೋತ್ಸಾಹನ ಕಾರ್ಯಾಗಾರ’ವನ್ನು ಸೆ.3ರಂದು ಆಯೋಜಿಸಲಾಗಿದೆ.
ಕಲಬುರಗಿ ನಗರದ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಹಿಂಭಾಗದಲ್ಲಿರುವ ಕೆಜಿಟಿಟಿಐ (KGTTI) ಸಭಾಂಗಣದಲ್ಲಿ ಕಾರ್ಯಾಗಾರ ನಡೆಯಲಿದೆ ಎಂದು ಉತ್ತರ ವಲಯದ ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಕಾರ್ಯಾಗಾರದಲ್ಲಿ ಜವಳಿ ಉತ್ಪನ್ನಗಳ ರಫ್ತಿಗೆ ಲಭ್ಯವಿರುವ ಅವಕಾಶಗಳು, ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳಿಂದ ದೊರೆಯುವ ವಿವಿಧ ಸೌಲಭ್ಯಗಳು ಮತ್ತು ಸಹಾಯಧನಗಳು ಹಾಗೂ ನೋಂದಣಿ ಪ್ರಕ್ರಿಯೆಗಳ ಕುರಿತು ಮಾಹಿತಿ ನೀಡಲಾಗುವುದು.
ಇದೇ ಸಂದರ್ಭದಲ್ಲಿ ಐಇಸಿ (IEC) ಪ್ರಮಾಣಪತ್ರ ನೋಂದಣಿಗೆ ಅಗತ್ಯ ಸೌಲಭ್ಯವನ್ನು ಕಲ್ಪಿಸಲಾಗುವುದು.
ಆಸಕ್ತ ಸಂಭಾವ್ಯ ಜವಳಿ ರಫ್ತು ಉದ್ದಿಮೆದಾರರು ಕಾರ್ಯಾಗಾರದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.