ಕಲಬುರಗಿ | ಬೆಂಬಲ ಬೆಲೆ ಯೋಜನೆಯಡಿ ಕಡಲೇ ಕಾಳು ಖರೀದಿ : ಡಿಸಿ ಬಿ.ಫೌಝಿಯಾ ತರನ್ನುಮ್
"ಎ.18ರವರೆಗೆ ನೋಂದಣಿ, ಎ.28ರ ವರೆಗೆ ಮಾರಾಟಕ್ಕೆ ಅವಕಾಶ"
ಕಲಬುರಗಿ: ಪ್ರಸಕ್ತ 2025-26ನೇ ಸಾಲಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕಡಲೇ ಕಾಳು ಖರೀದಿಗೆ ರಾಜ್ಯ ಸರ್ಕಾರ ಆದೇಶಿಸಿರುವುದರಿಂದ ಜಿಲ್ಲೆಯಾದ್ಯಂತ 70 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಖರೀದಿ ಕೇಂದ್ರಗಳಾಗಿ ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ತಿಳಿಸಿದ್ದಾರೆ.
ಎಪ್.ಎ.ಕ್ಯೂ ಗುಣಮಟ್ಟದ ಪ್ರತಿ ಕ್ವಿಂಟಾಲಗೆ 5,875 ರೂ. ದರ ನಿಗದಿ ಮಾಡಿದೆ. ಪ್ರತಿ ಎಕರೆಗೆ 4 ಕ್ವಿಂಟಲ್ ನಂತೆ ಪ್ರತಿ ರೈತನಿಂದ ಗರಿಷ್ಠ 40 ಕ್ವಿಂಟಾಲ್ ಕಡಲೇ ಖರೀದಿಸಲಾಗುವುದು. ನೊಂದಣಿ ಕಾರ್ಯ ಎ.18 ರವರೆಗೆ ನಡೆಯಲಿದೆ. ಇನ್ನು ನೋಂದಣಿಯಾದ ರೈತರಿಂದ ಕಡಲೇ ಕಾಳು ಖರೀದಿ ಪ್ರಕ್ರಿಯೆ ಎ.28 ರವರೆಗೆ ಸಾಗಲಿದೆ. ರೈತರಿಂದ ಖರೀದಿಸಿದ ಉತ್ಪನ್ನದ ಮೌಲ್ಯವನ್ನು ಡಿ.ಬಿ.ಟಿ ಪೋರ್ಟಲ್ ಮೂಲಕ ರೈತರ ಬ್ಯಾಂಕ್ ಖಾತೆಗೆ ಪಾವತಿಸಲಾಗುವುದು ಎಂದು ಡಿ.ಸಿ. ಬಿ.ಫೌಝಿಯಾ ತರನ್ನುಮ್ ತಿಳಿಸಿದ್ದಾರೆ.
ಇನ್ನು ಕಲಬುರಗಿ ಜಿಲ್ಲೆಗೆ ಕಡಲೇ ಕಾಳು ಖರೀದಿಸಲು ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಕಲಬುರಗಿ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಕಲಬುರಗಿ ಸಂಸ್ಥೆಯನ್ನು ರಾಜ್ಯ ಖರೀದಿ ಸಂಸ್ಥೆಗಳಾಗಿ ನೇಮಿಸಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 70 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ಖರೀದಿ ಮಾಡಲಾಗುತ್ತದೆ. ಖರೀದಿ ಕೇಂದ್ರಗಳಲ್ಲಿ ಪಿ.ಓ.ಎಸ್. ಯಂತ್ರದ ಮೂಲಕ ರೈತರ ನೋಂದಣಿ ಹಾಗೂ ಖರೀದಿ ಪ್ರಕ್ರಿಯೆಯಲ್ಲಿ ಆಧಾರ್ ಬಯೋಮೆಟ್ರಿಕ್ ಪಡೆಯುವುದು ಕಡ್ಡಾಯವಾಗಿದ್ದು, ರೈತರು ಸಹಕರಿಸಬೇಕೆಂದು ಡಿ.ಸಿ ಮನವಿ ಮಾಡಿದ್ದಾರೆ.
ಜಿಲ್ಲೆಯ ರೈತ ಭಾಂದವರು ಸಮೀಪದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಭೇಟಿ ನೀಡಿ ಬೆಳೆದ ಕಡಲೇ ಕಾಳು ನಿಗದಿತ ಅವಧಿಯಲ್ಲಿ ಮಾರಾಟಕ್ಕೆ ನೊಂದಾಯಿಸಿಕೊಂಡು ಮಾರಾಟ ಮಾಡುವ ಮೂಲಕ ಯೋಜನೆಯ ಲಾಭ ಪಡೆಯುವಂತೆ ಟಾಸ್ಕ್ ಪೋರ್ಸ್ ಸಮಿತಿಯ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ಇನ್ನು ಖರೀದಿ ಮತ್ತು ನೋಂದಣಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಕಲಬುರಗಿ ಮೊ.ನಂ. 9449864446 ಮತ್ತು ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ದಿ ಮಂಡಳಿ ಕಲಬುರಗಿ ಮೊ.ನಂ. 8970555457 ಸಂಪರ್ಕಿಸಬಹುದಾಗಿದೆ.