ಕಲಬುರಗಿ | ಹಗಲು ಕಬ್ಬು ಕಟಾವು, ರಾತ್ರಿ ಮನೆಗಳ್ಳತನ: ಇಬ್ಬರು ಆರೋಪಿಗಳ ಬಂಧನ
ಬಂಧಿತ ಆರೋಪಿಗಳು
ಕಲಬುರಗಿ : ಹಗಲು ವೇಳೆಯಲ್ಲಿ ಕಬ್ಬು ಕಟಾವು ಕೆಲಸ ಮಾಡಿಕೊಂಡು, ರಾತ್ರಿ ಸಮಯದಲ್ಲಿ ಮನೆಗಳ್ಳತನ ನಡೆಸುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ನಗರ ಪೊಲೀಸರು ವಶಕ್ಕೆ ಪಡೆದು, 67 ಗ್ರಾಂ ಬಂಗಾರದ ಆಭರಣಗಳು, 1.02 ಲಕ್ಷ ರೂ. ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಸೇರಿ ಒಟ್ಟು 12.14 ಲಕ್ಷ ರೂ. ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಳಂದ ತಾಲೂಕಿನ ಕಮಸರ ನಾಯಕ ತಾಂಡಾದ ನಿವಾಸಿ ಅಪ್ಪಾಜಿ ಅಲಿಯಾಸ್ ಅಪ್ಪು ಗಂಗಾರಾಮ ಚವ್ಹಾಣ (22) ಹಾಗೂ ಆಳಂದ ತಾಲೂಕಿನ ಶಕಾಪುರ ತಾಂಡಾದ ನಿವಾಸಿ ಸಂತೋಷ್ ಅಲಿಯಾಸ್ ಅಂತ್ಯಾ ಗೋವಿಂದ ಚವ್ಹಾಣ (30) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಮಾಹಿತಿ ನೀಡಿದರು.
ವೀರೇಂದ್ರ ಪಾಟೀಲ್ ಬಡಾವಣೆಯ ನಿವಾಸಿ ವೀರಭದ್ರಯ್ಯ ಸ್ವಾಮಿ ಅವರು, ತಮ್ಮ ಮನೆಯಿಂದ 4.35 ಲಕ್ಷ ರೂ. ಮೌಲ್ಯದ ಬಂಗಾರ ಮತ್ತು ನಗದು ಹಣ ಕಳ್ಳತನವಾಗಿದೆ ಎಂದು ಕಳೆದ ವರ್ಷ ಜೂ.3 ರಂದು ಎಂ.ಬಿ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡವನ್ನು ರಚಿಸಿದ್ದರು.
ಡಿಸಿಪಿ ಪ್ರವೀಣ್ ನಾಯಕ, ಎಸಿಪಿ ಶಿವನಗೌಡ ಪಾಟೀಲ್ ಹಾಗೂ ಪಿಐ ಖಾಜಾ ಹುಸೇನ್ ಅವರ ನೇತೃತ್ವದಲ್ಲಿ ಕ್ಷಿಪ್ರ ತನಿಖೆ ನಡೆಸಿದ ತಂಡವು ಆರೋಪಿಗಳಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಅವರಿಂದ 12.14 ಲಕ್ಷ ರೂ. ಮೌಲ್ಯದ ಕಳವು ಸ್ವತ್ತನ್ನು ವಶಪಡಿಸಿಕೊಂಡಿದೆ ಎಂದು ಆಯುಕ್ತರು ವಿವರಿಸಿದರು.
ಬಂಧಿತ ಆರೋಪಿಗಳು ಪರಸ್ಪರ ಸಂಬಂಧಿಕರಾಗಿದ್ದು, ಹಗಲು ವೇಳೆಯಲ್ಲಿ ಕಬ್ಬು ಕಟಾವು ಕೆಲಸಕ್ಕೆ ತೆರಳಿ, ರಾತ್ರಿ ಸಮಯದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಬಡಾವಣೆಗಳನ್ನು ಗುರಿಯಾಗಿಸಿಕೊಂಡು, ಕಳೆದ ಎರಡು ತಿಂಗಳ ಅವಧಿಯಲ್ಲಿ ತಮ್ಮ ದುಂದು ವೆಚ್ಚಕ್ಕಾಗಿ ಮನೆಗಳ್ಳತನ ನಡೆಸುತ್ತಿದ್ದರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಪ್ರವೀಣ್ ನಾಯಕ, ಎಸಿಪಿ ಶಿವನಗೌಡ ಪಾಟೀಲ್, ಪಿಐ ಖಾಜಾ ಹುಸೇನ್ ಉಪಸ್ಥಿತರಿದ್ದರು.
ಫೆ.1 ರಿಂದ ಹೆಲ್ಮೆಟ್ ಕಡ್ಡಾಯ :
ಕೆಲವು ವರ್ಷಗಳ ಮಾಹಿತಿ ಪ್ರಕಾರ ಬೈಕ್ ಅಪಘಾತಗಳಿಂದ ಸಾವನ್ನಪ್ಪಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಅದನ್ನು ತಡೆಗಟ್ಟಲು ನಗರದಾದ್ಯಂತ ಹೆಲ್ಮೆಟ್ ಧರಿಸುವುದು ಕಡ್ಡಾಯ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ಫೆ.1ರಿಂದ ಪೊಲೀಸ್ ಸಿಬ್ಬಂದಿಗಳಿಗೆ ಹೆಲ್ಮೆಟ್ ಧರಿಸುವುದು ಕಡ್ಡಾಯ ಮಾಡಿದ ಬಳಿಕ ಸಾರ್ವಜನಿಕರಿಗೂ ಈ ನಿಯಮ ಅನ್ವಯಿಸಲಿದೆ.
-ಡಾ.ಶರಣಪ್ಪ ಎಸ್.ಡಿ (ನಗರ ಪೊಲೀಸ್ ಆಯುಕ್ತರು)