ಕಲಬುರಗಿಯ ಬಹಮನಿ ಕೋಟೆಯ ಬೃಹತ್ ತೋಪ್‌ಗೆ ಗಿನ್ನಿಸ್ ದಾಖಲೆ ಅಗತ್ಯ : ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ
ಶೂನ್ಯ ವೇಳೆಯಲ್ಲಿ ʼವಾರ್ತಾ ಭಾರತಿʼ ವರದಿ ಉಲ್ಲೇಖಿಸಿ, ರಾಜ್ಯ ಸರಕಾರಕ್ಕೆ ಒತ್ತಾಯ
ತಿಪ್ಪಣ್ಣಪ್ಪ ಕಮಕನೂರ
ಕಲಬುರಗಿ/ಬೆಂಗಳೂರು : ಕಲಬುರಗಿ ನಗರದಲ್ಲಿರುವ ಬಹಮನಿ ಕೋಟೆಯೊಳಗಿನ ಬೃಹತ್ ತೋಪ್ ಅನ್ನು ಗಿನ್ನಿಸ್ ವರ್ಲ್ಡ್ ರೆಕಾರ್ಡ್‌ಗೆ ಸೇರ್ಪಡೆಗೊಳಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರು ಒತ್ತಾಯಿಸಿದ್ದಾರೆ.
ಶುಕ್ರವಾರ ನಡೆದ ವಿಧಾನ ಪರಿಷತ್ ಅಧಿವೇಶನದ ಶೂನ್ಯ ವೇಳೆಯಲ್ಲಿ, ಜ.26 ರಂದು ವಾರ್ತಾ ಭಾರತಿ ಪತ್ರಿಕೆಯಲ್ಲಿ ಪ್ರಕಟವಾದ ವಿಶೇಷ ವರದಿಯತ್ತ ಗಮನ ಸೆಳೆದ ಅವರು, ಕಲಬುರಗಿಯ ಬಹಮನಿ ಕೋಟೆ ಐತಿಹಾಸಿಕವಾಗಿ ಅಪಾರ ಮಹತ್ವ ಹೊಂದಿದ್ದು, ಅದರೊಳಗಿನ ಬಾರಾ ಗಾಜಿನ ಕೋಟೆಯ ತೋಪು ಜಿಲ್ಲೆ ಮಾತ್ರವಲ್ಲ, ದೇಶದಲ್ಲಿಯೇ ಅತಿ ದೊಡ್ಡ ರಕ್ಷಣಾ ಶಸ್ತ್ರಾಸ್ತ್ರವಾಗಿದೆ ಎಂದರು.
ಪ್ರಸ್ತುತ ಆಂಧ್ರಪ್ರದೇಶದಲ್ಲಿರುವ ತೋಪು 23 ಅಡಿ ಉದ್ದವಿದ್ದು, ಅದನ್ನು ಗಿನ್ನಿಸ್ ದಾಖಲೆಗೆ ಸೇರಿಸಲಾಗಿದೆ. ಆದರೆ ಕಲಬುರಗಿಯ ತೋಪು 29 ಅಡಿ ಉದ್ದ ಹೊಂದಿದ್ದು, ವೈಜ್ಞಾನಿಕವಾಗಿ ಅಳತೆ ನಡೆಸಿದರೆ ಜಗತ್ತಿನ ಅತಿದೊಡ್ಡ ತೋಪು ಎಂದು ಅಧಿಕೃತವಾಗಿ ಗುರುತಿಸುವ ಸಾಧ್ಯತೆ ಇದೆ. ಸೂಕ್ತ ಪ್ರಚಾರ ಹಾಗೂ ದಾಖಲೆಗಳ ಕೊರತೆಯಿಂದಾಗಿ ಈ ಐತಿಹಾಸಿಕ ತೋಪು ಜಾಗತಿಕ ಮಟ್ಟದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತಕ್ಷಣವೇ ಗಿನ್ನಿಸ್ ವರ್ಲ್ಡ್ ರೆಕಾರ್ಡ್‌ಗೆ ಪ್ರಸ್ತಾವ ಸಲ್ಲಿಸಬೇಕು ಎಂದು ಆಗ್ರಹಿಸಿದ ಅವರು, ತೋಪಿನ ಸುತ್ತಮುತ್ತ ಭದ್ರತಾ ಬೇಲಿ, ಮೂಲಸೌಲಭ್ಯಗಳ ಅಭಿವೃದ್ಧಿ, ಪ್ರವಾಸೋದ್ಯಮ ಉತ್ತೇಜನಕ್ಕೆ ಕ್ರಮ ಕೈಗೊಳ್ಳಬೇಕು ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಸದನದಲ್ಲಿ ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಕಾನೂನು, ಸಂಸದೀಯ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಅವರು, ಮಹತ್ವದ ವಿಷಯವನ್ನು ಸರ್ಕಾರದ ಗಮನಕ್ಕೆ ತಂದಿರುವುದಕ್ಕಾಗಿ ಕೃತಜ್ಞತೆ ಸಲ್ಲಿಸಿದರು. 23 ಅಡಿ ತೋಪು ಗಿನ್ನಿಸ್ ದಾಖಲೆಗೆ ಸೇರಿದ್ದರೆ, 29 ಅಡಿ ಇರುವ ಕಲಬುರಗಿ ತೋಪು ಖಂಡಿತವಾಗಿಯೂ ಅರ್ಹವಾಗಿದೆ ಎಂದು ಹೇಳಿದರು.
ಈ ಕುರಿತು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಚರ್ಚೆ ನಡೆಸಿರುವುದಾಗಿ ತಿಳಿಸಿದ ಅವರು, ಒಂದು ವಾರದೊಳಗೆ ಜಿಲ್ಲಾಧಿಕಾರಿಗಳಿಂದ ವರದಿ ಸಲ್ಲಿಸಲು ಸೂಚನೆ ನೀಡಲಾಗುವುದು ಎಂದರು.
ವರದಿ ಬಂದ ನಂತರ ಪ್ರಾಚ್ಯ ವಸ್ತು ಇಲಾಖೆ ಮೂಲಕ ಅಗತ್ಯ ಅನುದಾನ ಒದಗಿಸಲಾಗುವುದು. ಕಲಬುರಗಿಯನ್ನು ಪ್ರಮುಖ ಪ್ರಾದೇಶಿಕ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡಲಿದೆ ಎಂದು ಭರವಸೆ ನೀಡಿದರು.