×
Ad

ಕಲಬುರಗಿ | ಅಂಬಲಗಾ ಗ್ರಾ.ಪಂಗೆ ಪಿಡಿಓ ನೇಮಕಕ್ಕೆ ಒತ್ತಾಯಿಸಿ ಫೆ.3ರಂದು ಪ್ರತಿಭಟನೆ

Update: 2026-01-30 21:00 IST

ಕಲಬುರಗಿ : ಕಮಲಾಪುರ ತಾಲೂಕಿನ ಅಂಬಲಗಾ ಗ್ರಾಮ ಪಂಚಾಯತ್‌ಗೆ ಕಳೆದ ಆರು ತಿಂಗಳಿಂದ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ (ಪಿಡಿಓ) ನೇಮಕವಾಗದೆ, ರೈತರು ಹಾಗೂ ಗ್ರಾಮಸ್ಥರು ಶುದ್ಧ ಕುಡಿಯುವ ನೀರು, ಶೌಚಾಲಯ, ಚರಂಡಿ ನಿರ್ಮಾಣ, ದಾಖಲೆ ಸೇರಿದಂತೆ ಮೂಲಭೂತ ಸೌಲಭ್ಯಗಳಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಪಿಡಿಓ ನೇಮಕ ಮಾಡಬೇಕೆಂದು ಆಗ್ರಹಿಸಿ ಫೆ.3ರಂದು ಕಲಬುರಗಿ ನಗರದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಅಂಬಲಗಾ ಗ್ರಾ.ಪಂ ಅಧ್ಯಕ್ಷ ತಾಜೋದ್ದಿನ್ ಪಟೇಲ್ ತಿಳಿಸಿದ್ದಾರೆ.

ಈ ಹಿಂದೆ ಕುರಿಕೋಟಾ ಪಂಚಾಯಿತಿಯ ಪಿಡಿಓ ಅಭಿಜಿತ್ ಅವರಿಗೆ ಹೆಚ್ಚುವರಿ ಪ್ರಭಾರ ನೀಡುವಂತೆ ಜಿಲ್ಲಾ ಪಂಚಾಯಿತಿ ಸಿಇಓ ಆದೇಶಿಸಿದ್ದರು. ಆದರೆ ಅಭಿಜಿತ್ ಅವರು ಕೇವಲ ಎರಡು ಬಾರಿ ಪಂಚಾಯಿತಿಗೆ ಹಾಜರಾಗಿ, ನಂತರ ಯಾವುದೇ ಕಾರಣ ನೀಡದೇ ಪಂಚಾಯಿತಿಗೆ ಬರುವುದನ್ನು ನಿಲ್ಲಿಸಿದ್ದಾರೆ. ಈ ಹಿನ್ನೆಲೆ ಆ.8ರಂದು ಅಂಬಲಗಾ ಗ್ರಾ.ಪಂ ವತಿಯಿಂದ ಹೆಚ್ಚುವರಿ ಪ್ರಭಾರ ಕೈಬಿಡುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರ ಬರೆಯಲಾಗಿದೆ ಎಂದು ತಾಜೋದ್ದಿನ್ ಪಟೇಲ್ ತಿಳಿಸಿದ್ದಾರೆ.

ಅಂಬಲಗಾ, ಅಂಬಲಗಾ ತಾಂಡಾ, ಕುದಮೂಡ, ಕುದಮೂಡ ತಾಂಡಾ, ಕಲಕುಟಗಾ ಸೇರಿದಂತೆ ಮೂರು ಗ್ರಾಮಗಳು ಹಾಗೂ ಎರಡು ತಾಂಡಾಗಳು ಅಂಬಲಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿವೆ. ಪಂಚಾಯಿತಿಗೆ ಸಂಬಂಧಿಸಿದಂತೆ ನರೇಗಾ ಕಾಮಗಾರಿಗಳ ಸಾಮಗ್ರಿ ಮೊತ್ತ ಬಿಡುಗಡೆ, ಸ್ವಚ್ಛ ಭಾರತ ಯೋಜನೆಯ ವೈಯಕ್ತಿಕ ಶೌಚಾಲಯಗಳ ಪ್ರೋತ್ಸಾಹ ಧನ ಪಾವತಿ, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಹಣ ಬಿಡುಗಡೆ, ಕೆಲವು ದೇವಾಲಯ ಕಟ್ಟಡಗಳಿಗೆ ಮಂಜೂರಾದ ಅನುದಾನ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ಪಿಡಿಓ ಕೊರತೆಯಿಂದ ಸ್ಥಗಿತಗೊಂಡಿವೆ. ಕಾಮಗಾರಿಗಳನ್ನು ಪ್ರಾರಂಭಿಸಲು ಅಗತ್ಯವಿರುವ 9/11ಬಿ ಫಾರ್ಮ್‌ಗಾಗಿ ಜನರು ಅಲೆಯುವಂತಾಗಿದೆ ಎಂದು ಅವರು ದೂರಿದರು.

ಉತ್ತಮ ಕಾರ್ಯನಿರ್ವಹಣೆಗೆ ಅಂಬಲಗಾ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದ್ದರೂ, ಕಳೆದ ಆರು ತಿಂಗಳಿಂದ ಮನೆ ನಿರ್ಮಾಣ ಸಂಬಂಧಿತ ದಾಖಲೆಗಳು, ನಿವೇಶನಗಳ ಮ್ಯೂಟೇಷನ್, ಸಾರ್ವಜನಿಕರಿಗೆ ಸಂಬಂಧಿಸಿದ ಎಲ್ಲ ಪಂಚಾಯಿತಿ ಕೆಲಸ ಕಾರ್ಯಗಳು ಸಂಪೂರ್ಣವಾಗಿ ನಿಂತಿವೆ.

ಗಾಂಧಿ ಗ್ರಾಮ ಪುರಸ್ಕಾರ ದೊರೆತ ನಂತರವೂ ಜಿಲ್ಲಾ ಪಂಚಾಯಿತಿ ಸಿಇಓ ಅವರು ಉದ್ದೇಶಪೂರ್ವಕವಾಗಿ ಪಿಡಿಓ ನೇಮಕ ಮಾಡದೆ ಪಂಚಾಯಿತಿಯ ಅಭಿವೃದ್ಧಿಗೆ ಅಡ್ಡಿಯಾಗುತ್ತಿದ್ದಾರೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜ.3 ರಂದು ಜಿಪಂ ಕಚೇರಿ ಮುತ್ತಿಗೆ:

ಅಂಬಲಗಾ ಗ್ರಾಮ ಪಂಚಾಯಿತಿಗೆ ಪಿ.ಡಿ.ಓ ನಿಯೋಜನೆ ಮಾಡುವಂತೆ ಆಗ್ರಹಿಸಿ ಫೆ.3ರಂದು ಬೆಳಗ್ಗೆ 11 ಗಂಟೆಗೆ ಕಲಬುರಗಿ ನಗರದ ಜಗತ್ ವೃತ್ತದಿಂದ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಸರ್ವ ಸದಸ್ಯರ ನೇತೃತ್ವದಲ್ಲಿ ವಿನೂತನ ರೀತಿಯಲ್ಲಿ ಜಿಲ್ಲಾ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಗಾಂಧಿ ಗ್ರಾಮ ಪುರಸ್ಕಾರ ಪಡೆದ ನಮ್ಮ ಗ್ರಾಮ ಪಂಚಾಯಿತಿಗೆ 6 ತಿಂಗಳಿಂದ ಪಿಡಿಒ ಇಲ್ಲ. ತಾ.ಪಂ ಇಓ ನಿರ್ದೇಶನದ ಮೇರೆಗೆ ನೀರು ನಿರ್ವಹಣೆ ಸೇರಿದಂತೆ ಅನೇಕ ಕೆಲಸಗಳಿಗೆ ಕೈಯಿಂದ ದುಡ್ಡು ಸುರಿದಿದ್ದೇನೆ. ಫೆ.5ರಂದು ಅಧಿಕಾರವಧಿ ಮುಗಿಯುತ್ತದೆ. ಸಚಿವರು ಸೂಚಿಸಿದರೂ ಪಿಡಿಓ ಒದಗಿಸದೆ ಜಿ.ಪಂ ಸಿಇಓ ಚೆಲ್ಲಾಟ ಆಡುತ್ತಿದ್ದಾರೆ.

-ತಾಜೋದ್ದೀನ್ ಪಟೇಲ್, ಅಧ್ಯಕ್ಷ. ಗ್ರಾ.ಪಂ ಅಂಬಲಗಾ.




Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News