×
Ad

ಡಿಸೆಂಬರ್ ಅಂತ್ಯಕ್ಕೆ ಪ್ರಜಾಸೌಧ, ತಾಲೂಕು ಆಸ್ಪತ್ರೆಯ ಕಾಮಗಾರಿ ಪೂರ್ಣಗೊಳಿಸಲು ಡಿಸಿ ಬಿ.ಫೌಝಿಯಾ ತರನ್ನುಮ್ ಗಡುವು

Update: 2026-02-02 17:41 IST

ಕಲಬುರಗಿ : ನೂತನ ತಾಲೂಕು ಕಮಲಾಪೂರದಲ್ಲಿ 8.30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಪ್ರಜಾ ಸೌಧ ಹಾಗೂ 42 ಕೋಟಿ ರೂ. ವೆಚ್ಚದ 100 ಹಾಸಿಗೆಗಳ ತಾಲೂಕು ಆಸ್ಪತ್ರೆ ಕಾಮಗಾರಿಗಳನ್ನು ಡಿಸೆಂಬರ್–2026ರ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಬಿ. ಫೌಝಿಯಾ ತರನ್ನುಮ್ ಅವರು ಗುತ್ತಿಗೆದಾರರಿಗೆ ಗಡುವು ನೀಡಿದ್ದಾರೆ.

ಶನಿವಾರ ಕಮಲಾಪೂರ ತಾಲೂಕಿಗೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ಅವರು, ಕಾಮಗಾರಿಯಲ್ಲಿ ಗುಣಮಟ್ಟ ಕಡ್ಡಾಯ, ಕಾಲಮಿತಿಯೊಳಗೆ ಕೆಲಸ ಮುಗಿಸಬೇಕು. ಕಳಪೆ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.

ಇದಲ್ಲದೆ, ನೂತನವಾಗಿ ನಿರ್ಮಾಣಗೊಂಡ ಅತಿಥಿಗೃಹ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ತಕ್ಷಣ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಿದರು. ಬಿದ್ದಾಪುರ ಗ್ರಾಮದಲ್ಲಿನ ಎನ್.ಎ. ಪ್ರಸ್ತಾವನೆಯ ಭೂಮಿಯನ್ನೂ ಪರಿಶೀಲಿಸಿದರು.

ತಾಲೂಕಿನ ಜೀವಣಗಿಯಲ್ಲಿ 212 ಕೋಟಿ ರೂ. ಹೂಡಿಕೆಯೊಂದಿಗೆ ಸ್ಥಾಪನೆಯಾಗುತ್ತಿರುವ 200 ಕೆಎಲ್‌ಪಿಡಿ ಧಾನ್ಯ ಆಧಾರಿತ ಎಥೆನಾಲ್ ಡಿಸ್ಟಿಲರಿ ಘಟಕಕ್ಕೆ ಭೇಟಿ ನೀಡಿ, ಪ್ರಾಯೋಗಿಕ ಉತ್ಪಾದನಾ ಕಾರ್ಯವನ್ನೂ ವೀಕ್ಷಿಸಿದರು. ಬಳಿಕ ಕಮಲಾಪೂರ ತಹಶೀಲ್ದಾರ ಕಚೇರಿಯಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತೆ ಸಾಹಿತ್ಯ, ತಹಶೀಲ್ದಾರ್‌ ಮುಹಮ್ಮದ್ ಮೊಹಸೀನ್, ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಅಬ್ದುಲ್ ಅಜೀಮ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News