ಕಲಬುರಗಿ | ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ವ್ಯಕ್ತಿಯ ಬಂಧನ; ವಕಾಲತ್ತು ವಹಿಸದಂತೆ ವಕೀಲರ ಸಂಘದಿಂದ ಪತ್ರ
ಬಂಧಿತ ಆರೋಪಿ
ಕಲಬುರಗಿ : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಪರಿಶಿಷ್ಟ ಸಮುದಾಯದ ರಾಜಕೀಯ ಮುಖಂಡರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡುತ್ತಿದ್ದ ‘ಗುಲಾಮರ ಅಪ್ಪ’ ಎಂಬ ಫೇಸ್‌ಬುಕ್ ಖಾತೆಯ ಅಡ್ಮಿನ್ ಆಗಿದ್ದ ಬೆಂಗಳೂರು ನಿವಾಸಿ ಆನಂದ್ ಅಂಜನಪ್ಪ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಂಧನದ ಬೆನ್ನಲ್ಲೇ, ಆರೋಪಿಯ ಪರವಾಗಿ ಯಾವುದೇ ವಕೀಲರು ವಕಾಲತ್ತು ವಹಿಸಬಾರದು ಎಂದು ಕರ್ನಾಟಕ ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡ ವಕೀಲರ ಜಾಗೃತಿ ಸಂಘ ಒತ್ತಾಯಿಸಿದೆ.
ಈ ಕುರಿತು ಗುಲ್ಬರ್ಗಾ ನ್ಯಾಯವಾದಿಗಳ ಸಂಘಕ್ಕೆ ಪತ್ರ ಬರೆದಿರುವ ಸಂಘದ ಅಧ್ಯಕ್ಷ ವಿನೋದಕುಮಾರ್ ಕಾಂಬಳೆ, ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ಅವಹೇಳನಕಾರಿ ನಿಂದನೆ ಮಾಡಿದ ಆರೋಪದಡಿ ಸಬ್ ಅರ್ಬನ್ ಪೊಲೀಸ್ ಠಾಣೆ ಪೊಲೀಸರು ಆನಂದ್ ಅಂಜನಪ್ಪ ಅವರನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಆರೋಪಿಯ ವಿರುದ್ಧ ಇದೇ ಠಾಣೆಯಲ್ಲೇ ಕಳೆದ ವರ್ಷ ಗುನ್ನೆ ಸಂ.354/ 2025 ಅಡಿ ಪ್ರಕರಣ ದಾಖಲಾಗಿದೆ. ಇದೀಗ ಬಂಧಿತ ಆರೋಪಿ ಆನಂದ್ ಅಂಜನಪ್ಪ ಪರವಾಗಿ ಯಾವುದೇ ವಕೀಲರು ವಕಾಲತ್ತು ವಹಿಸಬಾರದು ಎಂದು ಒತ್ತಾಯಿಸಿದ್ದಾರೆ.