×
Ad

ಕಲಬುರಗಿ | ಬೆಳೆ ವಿಮೆಯ ಹಣವನ್ನು ರೈತರ ಖಾತೆಗೆ ವರ್ಗಾಯಿಸಲು ಆಗ್ರಹಿಸಿ ಮೇ 19ರಂದು ಧರಣಿ : ದಯಾನಂದ್ ಪಾಟೀಲ್

Update: 2025-05-17 18:43 IST

ಕಲಬುರಗಿ : ಬೆಳೆ ವಿಮೆಯ ಹಣವನ್ನು ರೈತರ ಖಾತೆಗೆ ವರ್ಗಾಯಿಸುವಂತೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇದೇ ಮೇ 19ರಂದು ಸಾಂಕೇತಿಕ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ನವ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ದಯಾನಂದ್ ಪಾಟೀಲ್ ಹೇಳಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂದು ಬೆಳಗ್ಗೆ 10.30ರಿಂದ ಸಂಜೆ 5 ಗಂಟೆಯವರೆಗೆ ನಗರದ ಜಗತ್ ವೃತ್ತದ ಬಸವೇಶ್ವರ ಮೂರ್ತಿ ಎದುರುಗಡೆ ಧರಣಿ ನಡೆಸಲಾಗುತ್ತಿದ್ದು, ಇದರಲ್ಲಿ ಜಿಲ್ಲೆಯ ಹೆಚ್ಚಿನ ರೈತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಕಳೆದ ಮಾರ್ಚ್ ನಲ್ಲಿ ನಡೆಸಿದ ಧರಣಿಯಿಂದಾಗಿ ಮಣಿದು ಸರಕಾರ 2,36,933 ರೈತರಿಗೆ 667.73 ಕೋಟಿ ರೂ. ಬೆಳೆ ವಿಮೆ ಮಂಜೂರು ಮಾಡಿ ಆದೇಶ ಹೊರಡಿಸಿತ್ತು. ಆದರೆ ಇಲ್ಲಿಯವರೆಗೆ ರೈತರ ಖಾತೆಗೆ ನಯಾಪೈಸೆ ಜಮೆಯಾಗಿಲ್ಲ, ಕೊಟ್ಟ ಮಾತು ಸರಕಾರ ಮರೆತಿದ್ದಂತಿದೆ. ಹಾಗಾಗಿ ಮತ್ತೆ ಎಚ್ಚರಿಸಲು ನಾವು ಸತ್ಯಾಗ್ರಹ ನಡೆಸುತ್ತಿದ್ದೇವೆ ಎಂದರು.

ಈ ವರ್ಷ ಮಳೆಗಾಲ ಜೂನ್ ತಿಂಗಳ ಮೊದಲ ವಾರದಲ್ಲಿ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಇಂತಹ ಸಂದರ್ಭದಲ್ಲಿ ರೈತರು ಬಿತ್ತನೆ ಕಾರ್ಯ ಪ್ರಾರಂಭಿಸಲಿದ್ದಾರೆ. ಈ ವೇಳೆಯಲ್ಲೇ ರೈತರಿಗೆ ಬಿತ್ತನೆ ಬೀಜ, ಗೊಬ್ಬರ, ಬಿತ್ತುವ ಸಾಮಗ್ರಿಗಳು ಸೇರಿದಂತೆ ಇತರ ಪರಿಕರಗಳನ್ನು ಖರೀದಿಸುವ ತುರ್ತು ಅಗತ್ಯವಿದ್ದಾಗ ಅವರಿಗೆ ಹಣದ ಅವಶ್ಯಕತೆ ಇರುತ್ತದೆ, ಹಾಗಾಗಿ ಅವರ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಸರಕಾರ ಕೂಡಲೇ ವಿಮೆಯನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಅಶೋಕ್ ಕುಮಾರ್, ಶಿವಾನಂದ್ ಮಠಪತಿ, ಸಿದ್ಧರಾಮ ಪಾಟೀಲ್, ಸುರೇಶ್ ಗುತ್ತೇದಾರ್ ಸೇರಿದಂತೆ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News